ಯತ್ನಾಳ್‌ ಉಚ್ಛಾಟನೆಯ ಪ್ರತಿಧ್ವನಿ; ಬಿಜೆಪಿ ತೊರೆಯಲು ಪಂಚಮಸಾಲಿ ನಾಯಕರಿಗೆ ಸ್ವಾಮೀಜಿ ಕರೆ

ಧಾರವಾಡ: ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿರುವ ಹೈಕಮಾಂಡ್ ನಿರ್ಧಾರದ ವಿರುದ್ಧ ಪಂಚಮಸಾಲಿ ಸಮಾಜ ಸಿಡಿದೆದ್ದಿದೆ. ಯತ್ನಾಳ್ ಅವರ ಉಚ್ಚಾಟನೆ ಖಂಡಿಸಿ ಎಲ್ಲಾ ಲಿಂಗಾಯತ ಶಾಸಕರು ಬಿಜೆಪಿ ಬಿಟ್ಟು ಹೊರಬನ್ನಿ ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದ್ದಾರೆ.

ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವ ಬಗ್ಗೆ ಧಾರವಾಡದಲ್ಲಿ ಪ್ರತಿಕ್ರಿಯಿಸಿರುವ ಶ್ರೀಗಳು, ಯತ್ನಾಳ್ ಉಚ್ಛಾಟನೆಗೆ ಬಿ.ಎಸ್‌.ಯಡಿಯೂರಪ್ಪ ಮತ್ತವರ ಕುಟುಂಬವೇ ಕಾರಣ ಎಂದು ದೂರಿದರು.

ಯತ್ನಾಳ್‌ ಎಂದಿಗೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕಾಣದ ಕೈಗಳು ಅವರನ್ನು ಉಚ್ಛಾಟನೆ ಮಾಡುವಂತೆ ಮಾಡಿವೆ. ಕುಟುಂಬ ರಾಜಕಾರಣ ಬೇಡ ಎನ್ನುವುದು ತಪ್ಪೇ? ಯತ್ನಾಳ್‌ ಏನೇ ಮಾತನಾಡಿದರೂ ಅವರು ಉತ್ತರ ಕರ್ನಾಟಕ, ಹಿಂದುತ್ವದ ಬಗ್ಗೆಯೇ ಮಾತನಾಡಿದ್ದಾರೆ ಎಂದು ತಮ್ಮ ಸಮೈದಾಯದ ಶಾಸಕನ ಬೆನ್ನಿಗೆ ನಿಂತಿರುವ ಶ್ರೀಗಳು, ಯತ್ನಾಳ್ ಉಚ್ಛಾಟನೆ ಆದೇಶವನ್ನು ಹೈಕಮಾಂಡ್ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಪಂಚಮಸಾಲಿಗಳು ಬಿಜೆಪಿಯಿಂದ ಹೊರ ಬರಬೇಕು ಎಂದು ಕರೆ ನೀಡಿದರು.

ಇದೇ ವೇಳೆ, ಈಗ ಬಿಜೆಪಿಗೆ 60 ಸ್ಥಾನ ಬಂದಿವೆ. ಮುಂದೆ ಮೂವತ್ತು ಸೀಟು ಕೂಡ ಬರುವುದಿಲ್ಲ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿರುವ ವೈಖರಿಯೂ ಗಮನಸೆಳೆದಿದೆ.

Related posts