ಶಸ್ತ್ರಚಿಕಿತ್ಸೆಗಾಗಿ ಮಧ್ಯಂತರ ಜಾಮೀನು; ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುವಂತಿಲ್ಲ; ದರ್ಶನ್‌ಗೆ ಹೈಕೋರ್ಟ್ ಆದೇಶ

ಬೆಂಗಳೂರು: ನಟ ದರ್ಶನ್ ತೂಗುದೀಪಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ನಟನಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ದರ್ಶನ್​ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ, ಶಸ್ತ್ರಚಿಕಿತ್ಸೆಗೆ ಅವಕಾಶ ಕೋರಿಕೆಯನ್ನು ಮನ್ನಿಸಿ ಹೈಕೋರ್ಟ್ 45 ದಿನಗಳ ಕಾಲದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿರುವ ನಟ ದರ್ಶನ್​ಗೆ ಹೈಕೋರ್ಟ್ ಆದೇಶದಿಂದ ರಿಲೀಫ್ ಸಿಕ್ಕಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಈ ಆದೇಶ ನೀಡಿದ್ದು, ಜಾಮೀನು ಪಡೆದ ಬಳಿಕ ಪ್ರತಿ ವಾರವೂ ನಟ ದರ್ಶನ್ ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ವಿವರವನ್ನು ಕೋರ್ಟ್ ಗೆ ನೀಡಬೇಕು. ಜೊತೆಗೆ ದರ್ಶನ್ ಪಾಸ್ಪೋರ್ಟನ್ನು ಕೋರ್ಟ್ ಸುಪರ್ದಿಗೆ ನೀಡಬೇಕು ಎಂದು ಸೂಚಿಸಿದೆ. ಈ ಜಾಮೀನು ಅವಧಿಯಲ್ಲಿ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ನ್ಯಾಯಪೀಠ ಷರತ್ತು ವಿಧಿಸಿದೆ.

ಕೊಲೆ ಪ್ರಕರಣ; ನಟ ದರ್ಶನ್ ಗ್ಯಾಂಗ್‌ಗೆ ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ಬೆಂಗಳೂರು: ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ತೂಗುದೀಪ್, ಗೆಳತಿ ಪವಿತ್ರಾ ಗೌಡ ಸಹಿತ ಎಲ್ಲಾ ಆರೋಪಿಗಳಿಗೆ ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಬುಧವಾರ ಈ ಆದೇಶ ನೀಡಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇತರ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಜಡ್ಜ್​ ಮುಂದೆ ಬುಧವಾರ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾದಿಶರು ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿಯನ್ನು ಆಗಸ್ಟ್ 28ರವರೆಗೆ ವಿಸ್ತರಿಸಿ ಆದೇಶಿಸಿದರು.