ರಥಬೀದಿ ವೆಂಕಟರಮಣ ದೇವಳದಲ್ಲಿ ಅಧಿಕ ಮಾಸದ ಕೈಂಕರ್ಯ; ಸಹಸ್ರ ತುಳಸಿ ಅರ್ಚನೆ, ಸಾಮೂಹಿಕ ಕುಂಕುಮಾರ್ಚನೆ

ಮಂಗಳೂರು: ಕರಾವಳಿ ನಗರಿ ಮಂಗಳೂರಿನ ಪುಣ್ಯಕ್ಷೇತ್ರಗಳಲ್ಲೊಂದಾದ ರಥಬೀದಿ ವೆಂಕಟರಮಣ ದೇವಳದಲ್ಲಿ ಅಧಿಕ ಮಾಸದ ಅಂಗವಾಗಿ ವಿಶೇಷ ಕೈಂಕರ್ಯಗಳು ಏರ್ಪಾಡಾಗಿವೆ. ಸಹಸ್ರ ತುಳಸಿ ಅರ್ಚನೆ, ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮಗಳು ಧಾರ್ಮಿಕ ಪ್ರಮುಖರ ಉಪಸ್ಥಿತಿಯಲ್ಲಿ ನೆರವೇರಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಅಧಿಕಮಾಸ ಅಂಗವಾಗಿ ಮಂಗಳೂರಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಗಸ್ಟ್ 13, ಭಾನುವಾರ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಪುಣ್ಯಪ್ರದ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವ ಭಕ್ತಾದಿಗಳು ಬೆಳಿಗ್ಗೆ 10 ಗಂಟೆಗೆ ಶ್ರೀ ದೇವಳದಲ್ಲಿ ಉಪಸ್ಥಿತರಿರಬೇಕಿದೆ. ಮಧ್ಯಾಹ್ನ 12.30ಕ್ಕೆ ಅಧಿಕಮಾಸ ಮಂಗಳಾಚರಣೆ ಕಾರ್ಯಕ್ರಮ ನಿಗದಿಯಾಗಿದ್ದು, ಸಂಜೆ 5.30ಕ್ಕೆ ಸಮಾಜದ ಮಾತೃ ವರ್ಗದವರಿಂದ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ನೆರವೇರಲಿದೆ. ಭಾಗವಹಿಸಲಿಚ್ಛಿಸುವ ಮಾತೃ ವರ್ಗದವರು ಸಾಂಪ್ರದಾಯಿಕ ಸೀರೆ ಧರಿಸಿರಬೇಕೆಂಬ ನಿಯಮ ಪಾಲಿಸಬೇಕೆಂದು ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಈ ಪ್ರಕಟಣೆ ಕೋರಿದೆ.