ಬೆಂಗಳೂರು: ಟಿಕೆಟ್ ಡೀಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಹಾಲಶ್ರೀ ಸ್ವಾಮೀಜಿಯನ್ನು ನ್ಯಾಯಾಲಯವು 10 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಡಿಸುವುದಾಗಿ ನಂಬಿಸಿ, ಉದ್ಯಮಿಗೆ 5 ಕೋಟಿ ವಂಚನೆ ಆರೋಪ ಬಗ್ಗೆ ಹಿಂದೂ ಸಂಘಟನೆಯ ನಾಯಕಿ ಎಂದು ಬಿಂಬಿಸಿಕೊಳ್ಳುತ್ತಿರುವ ಚೈತ್ರಾ ಕುಂದಾಪುರ ಹಾಗೂ ಪ್ರಧಾನಿ ಸಹಿತ ಹಲವು ರಾಷ್ಟ್ರೀಯ ಮುಖಂಡರ ಒಡನಾಟವಿದೆ ಎಂದು ಹೇಳಿಕೊಂಡಿದ್ದಾರೆನ್ನಲಾದ ಹಾಲಶ್ರೀ ಸ್ವಾಮೀಜಿ ಸಹಿತ ಹಲವರ ವಿರುದ್ದ ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದಿ ಗಂಭೀರ ಪ್ರಕರಣವಾಗಿರುವುದರಿಂದ ಪೊಲೀಸ್ ಆಯುಕ್ತರು ತನಿಖೆಯನ್ನು ಸಿಸಿಬಿಗೆ ವಹಿಸಿದ್ದಾರೆ.
ಈ ಪ್ರಕರಣದಲ್ಲಿ ಚೈತ್ರಾ ಕುಂದಾಪುರ, ಬಿಜೆಪಿ ನಾಯಕ ಗಗನ್ ಕಡೂರು ಸಹಿತ ಹಲವರನ್ನು ಸಿಸಿಬಿ ತಂಡ ಬಂಧಿಸುತ್ತಿದ್ದಂತೆಯೇ ಹಾಲಶ್ರೀ ಸ್ವಾಮೀಜಿ ತಲೆಮರೆಸಿಕೊಂಡಿದ್ದರು. ಬಂಧನ ಭೀತಿಯಿಂದ ಒಡಿಶಾಗೆ ಪಲಾಯನವಾಗಿದ್ದ ಹಾಲಶ್ರೀ ಸ್ವಾಮೀಜಿಯನ್ನು ಸಿಸಿಬಿ ತಂಡ ಬಂಧಿಸಿ ಮಂಗಳವಾರ ಬೆಂಗಳೂರಿಗೆ ಕರೆತಂದಿತ್ತು. ಇಂದು ಬೆಳಿಗ್ಗೆ ಬಂಧಿತ ಹಾಲಶ್ರೀ ಸ್ವಾಮೀಜಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಿದ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಕೋರಿದರು. ಈ ಮನವಿಯನ್ನು ಪುರಸ್ಕಾರಿಸಿದ ನ್ಯಾಯಾಧೀಶರು ಹಾಲಶ್ರೀ ಸ್ವಾಮಿಯನ್ನು ಈ ತಿಂಗಳ 29ರ ವರೆಗೆ ಪೊಲೀಸ್ ವಶಕ್ಕೆ ಒಪ್ಪಸಿದ್ದಾರೆ.