ಮಂಗಳೂರು: ಏಕೈಕ ತುಳು ಮಾಸ ಪತ್ರಿಕೆ ‘ಪೂವರಿ’ಯ ಸಂಸ್ಥಾಪಕ ಹೆಬ್ಬಾರಬೈಲ್ ವಿಜಯಕುಮಾರ್ ಭಂಡಾರಿ ಅವರ ಸನ್ಮಾನ ಸಮಾರಂಭ ಮಂಗಳೂರಿನಲ್ಲಿ ನಡೆಯಿತು.
‘ಪೂವರಿ’ಗೆ ತುಳುವರ ಸೆಲ್ಯೂಟ್
ತುಳುನಾಡಿನ ಜನರ ಅಭಿರುಚಿಯತ್ತ ಬೆಳಕು ಚೆಲ್ಲುವ, ತುಳು ನಾಡು-ನುಡಿಯ ವೈಭವ ಬಗ್ಗೆ ಬೆಳಕು ಚೆಲ್ಲುವ ಸಂಘಟನಾತ್ಮಕ ಶಕ್ತಿಗೆ ವೇದಿಕೆಯಾಗಿ ‘ಪೂವರಿ’ ತುಳು ಪತ್ರಿಕೆಯನ್ನು ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲ್ ಪ್ರಾರಂಭಿಸಿದ್ದರು. ಇವರ ತುಳು ನಾಡು-ನುಡಿಯ ಕೈಂಕರ್ಯವನ್ನು ಗೌರವಿಸಿ ದಕ್ಷಿಣ ಕನ್ನಡ ಗ್ಯಾರೇಜ್ ಮಾಲೀಕರ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾಹಿತ್ಯ ಕ್ಷೇತ್ರದ ದಿಗ್ಗಜರು, ಹೆಬ್ಬಾರಬೈಲ್ ವಿಜಯಕುಮಾರ್ ಭಂಡಾರಿ ಅವರ ಸಾಹಿತ್ಯ ಕೃಷಿ ಬಗ್ಗೆ ಗುಣಗಾನ ಮಾಡಿದರು. ಹೆಬ್ಬಾರಬೈಲ್ ವಿಜಯಕುಮಾರ್ ಭಂಡಾರಿ ಅವರು ಸಾಹಿತ್ಯ, ಕಲಾ ಸಂಸ್ಕೃತಿಯ ಪ್ರಸಾರಕ. ಅಕ್ಷರ ಮಂತ್ರದ ಮೂಲಕ ತುಳು ಭಾಷಿಗರನ್ನು ಸಂಘಟಿಸುವ ಮಹಾ ಮಾಂತ್ರಿಕ ಎಂದು ಅತಿಥಿಗಳು ಕೊಂಡಾಡಿದರು.
ತುಳು ಭಾಷಿಗರ ಪ್ರಾಬಲ್ಯವಿರುವ ದಕ್ಷಿಣಕನ್ನಡ, ಕಾಸರಗೋಡು, ಉಡುಪಿ, ಬೆಂಗಳೂರು, ಮುಂಬಯಿ ಮೊದಲಾದೆಡೆ ‘ಪೂವರಿ’ ತುಳು ಪತ್ರಿಕೆ ಪ್ರಸರಣ ಹೊಂದಿದೆ. ಸಂಸ್ಥಾಪಕ ಸಂಪಾದಕರಾಗಿರುವ ಹೆಬ್ಬಾರಬೈಲ್ ವಿಜಯಕುಮಾರ್ ಭಂಡಾರಿಯವರು ತುಳುನಾಡಿನ ಸಂಸ್ಕೃತಿ, ಹಬ್ಬ ಹರಿದಿನಗಳ ಬಗ್ಗೆ ತಮ್ಮ ಲೇಖನಗಳಲ್ಲಿ ಬೆಳಕು ಚೆಲ್ಲುತ್ತಿದ್ದಾರೆ. ಜಗತ್ತಿನ ಯಾವುದೇ ಭಾಗದಲ್ಲಿ ತುಳು ಕಾರ್ಯಕ್ರಮ ನಡೆದರೂ ಆ ಬಗ್ಗೆ ಮಾಹಿತಿ ಸಂಗ್ರಹಿಸಿ ಸಮಗ್ರ ಲೇಖನ ಬರೆದು ಆ ಕಾರ್ಯಕ್ರಮದ ಉದ್ದೇಶವನ್ನು ‘ಪೂವರಿ’ ಪತ್ರಿಕೆ ಮೂಲಕ ಅರ್ಥಪೂರ್ಣಗೊಳಿಸುತ್ತಿದ್ದಾರೆ. ಈ ಕಾರ್ಯವನ್ನು ಗೌರವಿಸಿ ವಿವಿಧ ಸಂಘಟನೆಗಳು ಇವರಿಗೆ ಅನೇಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.