ಪುರಾಣ ಪ್ರಧಾನ ಪ್ರಸಂಗಗಳಿಗೆ ವೇದಿಕೆಯಾಗಿದೆ ತುಳುನಾಡಿನ ಗಂಡುಕಲೆ ಯಕ್ಷಗಾನ. ಪುರಾಣ ಪ್ರಸಂಗಗಳ ಸ್ತ್ರೀ ಪಾತ್ರಧಾರಿಯಾಗಿ ಮಿಂಚುತ್ತಿದ್ದವರು ಕುರ್ನಾಡು ಶಿವಣ್ಣ ಆಚಾರ್ಯ. ಅವರ ಪಾತ್ರ, ಅಭಿನಯ ಇನ್ನು ನೆನಪು ಮಾತ್ರ.
ಉಡುಪಿ: ತುಳುನಾಡಿನ ಗಂಡುಕಲೆ ಯಕ್ಷಗಾನದ ಹಿರಿಯ ಕಲಾವಿದ ಕುರ್ನಾಡು ಶಿವಣ್ಣ ಆಚಾರ್ಯ ಇನ್ನಿಲ್ಲ. ಯಕ್ಷಗಾನದ ಸ್ತ್ರೀ ವೇಷಧಾರಿ ಯಾಗಿ ಅಭಿನಯಿಸಿ ಪುರಾಣ ಪ್ರಸಿದ್ಧ ಪಾತ್ರಗಳಿಗೆ ಜೀವ ತುಂಬುತ್ತಿದ್ದ ಶಿವಣ್ಣ ಕೆಲ ಕಾಲ ಅಸ್ವಸ್ಥರಾಗಿದ್ದರು. ಕಳೆದ ರಾತ್ರಿ ಅವರು ವಿಧಿವಶರಾಗಿದ್ದಾರೆ. ಕುರ್ನಾಡು ಶಿವಣ್ಣ ಆಚಾರ್ಯ ಅವರಿಗೆ 89 ವರ್ಷ ವಯಸ್ಸಾಗಿತ್ತು.
ಕಟೀಲು, ಧರ್ಮಸ್ಥಳ, ಸುಂಕದಕಟ್ಟೆ, ಮೂಲ್ಕಿ, ಹೆರ್ಗ, ಕೂಡ್ಲು, ವೇಣೂರು, ತಲಕಲ, ನಂದಾವರ, ಅಡ್ಯಾರು ಸಹಿತ ತುಳುನಾಡಿನ ಬಹುತೇಕ ಯಕ್ಷಗಾನ ಮೇಳಗಳಲ್ಲಿ ಅವರು ಅಭಿನಯಿದ್ದರು. ಬಹುತೇಕ ಸ್ತ್ರೀ ಪಾತ್ರದಲ್ಲೇ ಗಮನಸೆಳೆಯುತ್ತಿದ್ದ ಅವರು ತನ್ನ ಇಳಿವಯಸ್ಸಿನವರೆಗೂ ವಿವಿಧ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು.
ಇದನ್ನೂ ಓದಿ.. ಕೊರೋನಾ ಸೋಂಕು.. ವಾಟ್ಸಪ್ ಶಾಕ್.. ಇನ್ನು ಮೆಸೇಜ್ ಫಾರ್ವಾರ್ಡ್’ಗೆ ನಿರ್ಬಂಧ
ಯಕ್ಷ ಲೋಕದಲ್ಲಿ ಅಚ್ಚಳಿಯದ ನೆನಪು
ಯಕ್ಷಪಟು ದಂಬೆ ನಾಗಪ್ಪ ಭಂಡಾರಿಯವರಿಂದ ಗರಡಿಯಲ್ಲಿ ಪಳಗಿದವರು ಇವರು. ಶ್ರೀನಿವಾಸ ಆಚಾರ್ಯರು ಶಿವಣ್ಣರಿಗೆ ಅರ್ಥದಾರಿ ಗುರುಗಳು. ಪುರಾಣ ಪ್ರಧಾನ ಪ್ರಸಂಗಗಳಲ್ಲಿ ಅವರು ನಿರ್ವಹಿಸಿದ ಪಾತ್ರಗಳು ಯಕ್ಷ ಲೋಕದಲ್ಲಿ ಅಚ್ಚಳಿಯದ ನೆನಪುಗಳು. ರಾಮಾಯಣದ ಸೀತೆ, ಮಂಡೋದರಿ ಪಾತ್ರಗಳಿಗೆ ಜೀವ ತುಂಬಿ ಇಡೀ ಪ್ರಸಂಗಕ್ಕೆ ಆಕರ್ಷಣೆ ತುಂಬುತ್ತಿದ್ದರು ಕುರ್ನಾಡು ಶಿವಣ್ಣ ಆಚಾರ್ಯ.
ಸುಭದ್ರೆ, ತಾರೆ, ಕಯಾದು, ಸುಮತಿ ಮುಂತಾದ ಸ್ತ್ರೀ ಪಾತ್ರಗಳಲ್ಲಿ ಪ್ರಸಿದ್ದಿ ಪಡೆದಿದ್ದ ಶಿವಣ್ಣ ಆಚಾರ್ಯ ಅವರು, ಈಶ್ವರ, ನಾರದ ಮುಂತಾದ ಪಾತ್ರಗಳಲ್ಲೂ ಗಮನಸೆಳೆಯುತ್ತಿದ್ದರು. ಇದೀಗ ಈ ಹಿರಿಯ ಕಲಾವಿದನನ್ನು ಯಕ್ಷಗಾನ ಲೋಕ ಕಳೆದುಕೊಂಡಿದೆ.