ಐಐಟಿ ಮಾದರಿಯಲ್ಲಿ ಯುವಿಸಿಇ ಅಭಿವೃದ್ಧಿ; ಮುಂದಿನ ಅಧಿವೇಶನದಲ್ಲಿ ವಿಧೇಯಕ

ಬೆಂಗಳೂರು: ಪ್ರತಿಷ್ಠಿತ ಯೂನಿವರ್ಸಿಟಿ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜನ್ನು (UVCE) ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪ್ರತ್ಯೇಕ ಕಾಯ್ದೆಯ ಅಗತ್ಯವಿದ್ದು, ಅದಕ್ಕೆ ಬೇಕಾದ ವಿಧೇಯಕವನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.

ಯುವಿಸಿಇ ಕಾಯ್ದೆಯನ್ನು ರೂಪಿಸುವ ನಿಟ್ಟಿನಲ್ಲಿ ವಿವಿಧ ಐಐಟಿಗಳು ಹಾಗೂ ಐಐಎಂಗಳ ಕಾಯ್ದೆಗಳನ್ನು ಅಧ್ಯಯನ ಮಾಡಿ ಸಿದ್ಧಪಡಿಸಿದ ಸಮಗ್ರ ವರದಿಯನ್ನು ಐಐಐಟಿಬಿ ನಿರ್ದೇಶಕ ಡಾ.ಸಡಗೋಪನ್‌ ನೇತೃತ್ವದ ಸಮಿತಿ ಬೆಂಗಳೂರಿನಲ್ಲಿ ಮಂಗಳವಾರ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಸಲ್ಲಿಸಿತು. ವರದಿ ಸ್ವೀಕರಿಸಿದ ಡಿಸಿಎಂ, ನಮ್ಮ ರಾಜ್ಯದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾದ ಯುವಿಸಿಇ ಅನ್ನು ಅತ್ಯುನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಪ್ರತ್ಯೇಕ ಕಾಯ್ದೆಯ ಅಗತ್ಯವಿದೆ ಎಂದರು.

ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯಕ್ಕೆ ಶೈಕ್ಷಣಿಕ, ಆರ್ಥಿಕ, ಆಡಳಿತಾತ್ಮಕ ಸ್ವಾಯತ್ತತೆಯನ್ನು ನೀಡುವ ಬಗ್ಗೆ ಸರಕಾರಕ್ಕೆ ಮಹತ್ವದ ಶಿಫಾರಸುಗಳನ್ನು ಮಾಡಿರುವ ಸಮಿತಿಯು, ಸಂಸ್ಥೆಗೆ ಮೀಸಲಾದ ಪ್ರತ್ಯೇಕ ಹಾಗೂ ವಿಶೇಷ ಕಾಯ್ದೆ ಅಗತ್ಯ ಇರುವುದನ್ನು ಒತ್ತಿ ಹೇಳಿದೆ. ಅದರಂತೆ ಅಗತ್ಯವಾದ ಕಾನೂನು, ಆಡಳಿತಾತ್ಕಕ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ ಎಂದರು.

Related posts