ಕೆಎಸ್‌ಸಿಎ ಚುನಾವಣೆ ಮುಂದೂಡಿಕೆಗೆ ವೆಂಕಟೇಶ್ ಪ್ರಸಾದ್ ಆಕ್ಷೇಪ

ಬೆಂಗಳೂರು: ನವೆಂಬರ್‌ 30ಕ್ಕೆ ನಿಗದಿಯಾಗಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಚುನಾವಣೆಯನ್ನು ಮುಂದೂಡಿರುವುದಕ್ಕೆ ಸಂಸ್ಥೆಯ ಮಾಜಿ ವೇಗಗೋಲಂದಾಜು ವೆಂಕಟೇಶ್ ಪ್ರಸಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚುನಾವಣೆಯನ್ನು ಡಿಸೆಂಬರ್‌ 30ಕ್ಕೆ ಮುಂದೂಡಿರುವುದು ಸರಿಯಲ್ಲ ಎಂದಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಸಾದ್, “ಈ ನಿರ್ಧಾರ ನಮಗೆ ಸಂಪೂರ್ಣ ಆಘಾತಕರ. ಕೆಎಸ್‌ಸಿಎನಲ್ಲಿ ರಾಜಕೀಯಕ್ಕಲ್ಲ, ಕ್ರಿಕೆಟ್‌ಗೆ ಆದ್ಯತೆ ಸಿಗಬೇಕು. ನಾವು ಯಾವುದೇ ರಾಜಕೀಯ ಉದ್ದೇಶದಿಂದ ಬಂದಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉನ್ನತ ಮಟ್ಟದ ಕ್ರಿಕೆಟ್‌ಗೆ ಪುನರ್ಜೀವನ ನೀಡುವುದು, ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಐಪಿಎಲ್‌ ಮರಳಿ ಬರಲು ಸೂಕ್ತ ವಾತಾವರಣ ಸೃಷ್ಟಿಸುವುದು ನಮ್ಮ ಏಕೈಕ ಗುರಿ,” ಎಂದು ಹೇಳಿದ್ದಾರೆ.

ಚುನಾವಣೆಯು ನಿಗದಿಪಡಿಸಿದ ದಿನಾಂಕದಲ್ಲಿ ನಡೆಯಲೇಬೇಕು. ಕೆಎಸ್‌ಸಿಎ ಈಗ ನಿರ್ಣಾಯಕ ಹಂತದಲ್ಲಿದೆ. ಬದಲಾವಣೆಯ ಅಗತ್ಯ ತೀವ್ರವಾಗಿದೆ. ಈಗಾಗಲೇ ನಡೆಯುತ್ತಿರುವ ಋತುವಿನಲ್ಲಿ ಕ್ರಿಕೆಟ್‌ ಸಂಕಷ್ಟಕ್ಕೆ ಸಿಲುಕಿದೆ. ಹೊಸ ಸಮಿತಿಯು ತನ್ನ ದೃಷ್ಟಿಕೋನವನ್ನು ಜಾರಿಗೆ ತರಲು ಚುನಾವಣೆ ಅತ್ಯಗತ್ಯ. ಚುನಾವಣಾ ಆಯೋಗದೊಂದಿಗೆ ನಮಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ; ಅವರ ನಿರ್ಧಾರಗಳನ್ನು ಗೌರವಿಸುತ್ತೇವೆ. ಆದರೆ ಈ ಮುಂದೂಡಿಕೆ ಸಂಪೂರ್ಣ ಅಚ್ಚರಿಗೆ ಗುರಿಪಡಿಸಿದೆ,” ಎಂದರು.

Related posts