‘ಕಲ್ಯಾಣ ಕರ್ನಾಟಕ ಕಷ್ಟಕರ ಕರ್ನಾಟಕ’; ಸಾರಿಗೆ ಅವ್ಯವಸ್ಥೆ ಬಗ್ಗೆ ಬಿಜೆಪಿ ಟೀಕೆ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಲ್ಯಾಣ ಕರ್ನಾಟಕ “ಕಷ್ಟಕರ” ಕರ್ನಾಟಕವಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ದೂರಿದೆ. ದೋರನಹಳ್ಳಿಯಿಂದ 14 ಕಿಲೋ ಮೀಟರ್‌ ದೂರವಿರುವ ಶಹಾಪುರಕ್ಕೆ ಪ್ರತಿದಿನ 20 ರಿಂದ 30 ಹದಿಹರೆಯದ ಶಾಲಾ ವಿದ್ಯಾರ್ಥಿನಿಯರು ಕಾಲ್ನಡಿಗೆಯಲ್ಲೇ ಶಾಲೆಗೆ ಹೋಗುವ ದುಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಗಮನಸೆಳೆದಿದೆ.

ಈ ಕುರಿತಂತೆ ಸಾಮಾಜಿಕ ಮಾಧ್ಯಮ ‘X’ನಲ್ಲಿ ಪೋಸ್ಟ್ ಹಾಕಿರುವ ಬಿಜೆಪಿ, ‘ಕರ್ನಾಟಕದಲ್ಲಿನ್ನೂ ಸಂಪೂರ್ಣ ಬಸ್ ವ್ಯವಸ್ಥೆಯೇ ಇಲ್ಲದೆ ಶಕ್ತಿ ಯೋಜನೆ ಜಾಗತಿಕ ದಾಖಲೆ ಹೇಗೆ ಮಾಡಿತು?’ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಪ್ರಶ್ನಿಸಿದೆ.

14 ರಿಂದ 16 ವರ್ಷದ ವಿದ್ಯಾರ್ಥಿನಿಯರು ಶಾಲೆಯಿಂದ ಮನೆ ತಲುಪುವ ವೇಳೆಗೆ ರಾತ್ರಿಯೇ ಆಗಿರುತ್ತೆ. ಈ ವೇಳೆ ಕಿಡಿಗೇಡಿಗಳು, ಕಾಮಕರ ಕೈಗೆ ಸಿಕ್ಕರೇ ಅವರ ಪರಿಸ್ಥಿತಿಯೇನು? ಕಲ್ಯಾಣ ಕರ್ನಾಟಕದ ಬಗ್ಗೆ ಬುರುಡೆ ಭಾಷಣ ಬಿಡುವ ಪ್ರಿಯಾಂಕ್ ಖರ್ಗೆ ಅವರೇ, ಮಹಿಳೆಯರು ಮತ್ತು ಮಕ್ಕಳಿಗೆ ನೀಡುವ ಸುರಕ್ಷತೆ ಇದೇನಾ? ನಿಮ್ಮ ಕುಟುಂಬದ ದುರಾಡಳಿತದಿಂದಲ್ಲವೇ ಕಲ್ಯಾಣ ಕರ್ನಾಟಕ ಈ ಸ್ಥಿತಿ ತಲುಪಿರುವುದು ಎಂದು ಆರೋಪಿಸಿದೆ.

‘ಸರ್ಕಾರಿ ಶಾಲೆಗಳನ್ನು ಮುಚ್ಚಿ ಪಬ್ಲಿಕ್‌ ಸ್ಕೂಲ್‌ ತೆರೆಯುತ್ತಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ, ಮೊದಲು ಈ ಸಮಸ್ಯೆ ಬಗೆಹರಿಸಿ’ ಎಂದು ಬರೆದಿರುವ ಸಾಲುಗಳು ವ್ಯವಸ್ಥೆಯತ್ತ ಬೊಟ್ಟುಮಾಡಿದಂತಿದೆ.

Related posts