ತಿರುವನಂತಪುರಂ: ತಿರುವನಂತಪುರಂ ಕಾರ್ಪೊರೇಷನ್ನ ಶಾಸ್ತಮಂಗಲಂ ವಾರ್ಡ್ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೇರಳದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ (ಡಿಜಿಪಿ) ಶ್ರೀಲೇಖಾ ಗೆಲುವು ಸಾಧಿಸಿದ್ದಾರೆ. ಈ ಮೂಲಕ ನಗರಸಭೆ ಅಧಿಕಾರ ವಶಪಡಿಸಿಕೊಳ್ಳುವ ಪೈಪೋಟಿಯಲ್ಲಿ ಬಿಜೆಪಿ ತನ್ನ ಸ್ಥಿತಿಯನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.
ತಿರುವನಂತಪುರಂ ಕಾರ್ಪೊರೇಷನ್ ನಿಯಂತ್ರಣಕ್ಕಾಗಿ ಮೂರು ಪ್ರಮುಖ ರಾಜಕೀಯ ಮೈತ್ರಿಗಳ ನಡುವೆ ಕಠಿಣ ಸ್ಪರ್ಧೆ ನಡೆಯುತ್ತಿರುವ ಸಂದರ್ಭದಲ್ಲೇ ಶ್ರೀಲೇಖಾ ಅವರ ಜಯ ಲಭಿಸಿದೆ. ರಾಜಧಾನಿಯಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗವನ್ನು ಅಧಿಕಾರದಿಂದ ದೂರ ಸರಿಸಲು ಬಿಜೆಪಿ ನಡೆಸುತ್ತಿರುವ ಪ್ರಯತ್ನಕ್ಕೆ ಈ ಗೆಲುವು ಸಾಂಕೇತಿಕ ಹಾಗೂ ರಾಜಕೀಯ ಉತ್ತೇಜನವಾಗಿದೆ ಎಂದು ಪಕ್ಷ ವಿಶ್ಲೇಷಿಸಿದೆ.
ಪ್ರಸ್ತುತ ಲಭ್ಯ ಮಾಹಿತಿಯಂತೆ, 101 ಸದಸ್ಯರ ತಿರುವನಂತಪುರಂ ಕಾರ್ಪೊರೇಷನ್ನಲ್ಲಿ ಬಿಜೆಪಿ 34 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಡಪಕ್ಷಗಳು 20 ಸ್ಥಾನಗಳನ್ನು ಪಡೆದುಕೊಂಡಿದ್ದು, ಕಾಂಗ್ರೆಸ್ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಈ ವರ್ಷದ ಆರಂಭದಲ್ಲೇ ಶ್ರೀಲೇಖಾ ಬಿಜೆಪಿ ಸೇರಿದ್ದು ರಾಜಕೀಯ ವಲಯದಲ್ಲಿ ಅಚ್ಚರಿಯ ಪ್ರತಿಕ್ರಿಯೆ ಮೂಡಿಸಿತ್ತು. ಪೊಲೀಸ್ ಇಲಾಖೆಯಲ್ಲಿ ದೀರ್ಘ ಹಾಗೂ ವಿಶಿಷ್ಟ ಸೇವೆ ಸಲ್ಲಿಸಿದ್ದ ಅವರು, ಕೇರಳದ ಮೊದಲ ಮಹಿಳಾ ಡಿಜಿಪಿಯಾಗಿ ಕಾರ್ಯನಿರ್ವಹಿಸಿದ್ದ ಹಿನ್ನೆಲೆ ಹೊಂದಿದ್ದಾರೆ. ಇಂತಹ ಹಿರಿಯ ಅಧಿಕಾರಿಯೊಬ್ಬರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಾರ್ಡ್ ಸದಸ್ಯೆಯಾಗಿ ಸ್ಪರ್ಧಿಸಿರುವುದೂ ಗಮನ ಸೆಳೆದಿತ್ತು.
ಆದರೆ, ಅವರ ಚುನಾವಣಾ ಪ್ರಚಾರ ವಿವಾದಗಳಿಂದಲೂ ಮುಕ್ತವಾಗಿರಲಿಲ್ಲ. ಡಿಸೆಂಬರ್ 9ರ ಮತದಾನದ ದಿನ ಶ್ರೀಲೇಖಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಚುನಾವಣಾ ಪೂರ್ವ ಸಮೀಕ್ಷೆಯಂತೆ ತೋರುವ ಪೋಸ್ಟ್ ಹಂಚಿಕೊಂಡಿದ್ದು ತೀವ್ರ ಟೀಕೆಗೆ ಕಾರಣವಾಗಿತ್ತು. ಆ ಪೋಸ್ಟ್ನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ತಿರುವನಂತಪುರಂ ಕಾರ್ಪೊರೇಷನ್ನಲ್ಲಿ ಮೇಲುಗೈ ಸಾಧಿಸಿದೆ ಎಂದು ಹೇಳಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿದ್ದ ರಾಜ್ಯ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ, ಮತದಾನದ ದಿನವೇ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸುವುದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದ್ದರು. ಚುನಾವಣಾ ಆಯೋಗದ ನಿಯಮಗಳಿಗೆ ಇದು ವಿರುದ್ಧವಾಗಿದ್ದು, ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ವಿವಾದ ತೀವ್ರಗೊಳ್ಳುತ್ತಿದ್ದಂತೆ ಶ್ರೀಲೇಖಾ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಆ ಪೋಸ್ಟ್ ಅನ್ನು ಅಳಿಸಿದ್ದಾರೆ.
ಹಿಂದಿನ ಅವಧಿಯಲ್ಲಿ 100 ವಾರ್ಡ್ಗಳ ತಿರುವನಂತಪುರಂ ಕಾರ್ಪೊರೇಷನ್ನಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗ 51 ಸ್ಥಾನಗಳನ್ನು ಹೊಂದಿದ್ದರೆ, ಬಿಜೆಪಿ ನೇತೃತ್ವದ ಎನ್ಡಿಎ 35 ಸ್ಥಾನಗಳನ್ನು ಪಡೆದುಕೊಂಡಿತ್ತು. ಉಳಿದ ಸ್ಥಾನಗಳು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತು ಸ್ವತಂತ್ರರ ಪಾಲಾಗಿದ್ದವು.
