ಶ್ರೀನಗರ: ಜಮ್ಮು–ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಪದ್ದಾರ್ ಉಪವಿಭಾಗದ ಚಶೋತಿ ಪ್ರದೇಶದಲ್ಲಿ ಗುರುವಾರ ಸಂಜೆ ಸಂಭವಿಸಿದ ಭಾರೀ ಮೇಘಸ್ಫೋಟದಿಂದ ಕನಿಷ್ಠ 45 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರಲ್ಲಿ ಇಬ್ಬರು ಸಿಐಎಸ್ಎಫ್ ಸಿಬ್ಬಂದಿ ಹಾಗೂ ಮಚೈಲ್ ಮಾತಾ ಯಾತ್ರಿಕರು ಸೇರಿದ್ದಾರೆ.
ಸುಮಾರು 120 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 35ಕ್ಕೂ ಹೆಚ್ಚು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಅನೇಕರು ಕಾಣೆಯಾಗಿದ್ದಾರೆ. SDRF, NDRF, ಸೇನೆ, ಪೊಲೀಸರು ಹಾಗೂ ಸ್ಥಳೀಯ ಸ್ವಯಂಸೇವಕರು ಜಂಟಿಯಾಗಿ ಶೋಧ–ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಸೇನೆಯ 300ಕ್ಕೂ ಹೆಚ್ಚು ಸೈನಿಕರು ಸ್ಥಳಕ್ಕೆ ಧಾವಿಸಿದ್ದಾರೆ.
ಮೇಘಸ್ಫೋಟದಿಂದ ಡಜನ್ಗಟ್ಟಲೆ ಮನೆಗಳು, ಸರ್ಕಾರಿ ಕಟ್ಟಡಗಳು, ದೇವಸ್ಥಾನಗಳು, ಗೋಶಾಲೆಗಳು ಮತ್ತು ಒಂದು ಸೇತುವೆ ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಭಕ್ತರಿಗಾಗಿ ಸ್ಥಾಪಿಸಿದ್ದ ‘ಲಂಗರ್’ ಹಾಗೂ ತಾತ್ಕಾಲಿಕ ಅಂಗಡಿಗಳು ಸಂಪೂರ್ಣ ನಾಶವಾಗಿವೆ.
ದುರಂತದ ಹಿನ್ನೆಲೆಯಲ್ಲಿ ಮಚೈಲ್ ಮಾತಾ ಯಾತ್ರೆಯನ್ನು ತಕ್ಷಣದಿಂದ ಸ್ಥಗಿತಗೊಳಿಸಲಾಗಿದೆ. ಯಾತ್ರೆ ಜುಲೈ 25ರಂದು ಆರಂಭಗೊಂಡಿದ್ದು, ಸೆಪ್ಟೆಂಬರ್ 5ರಂದು ಕೊನೆಗೊಳ್ಳಬೇಕಿತ್ತು.