‘ನೀರಿದ್ದರೆ ನಾಳೆ’ ಯೋಜನೆಯ ಕರಪತ್ರ ಬಿಡುಗಡೆ

ಬೆಳಗಾವಿ: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಳಗಾವಿಯ ಸುವರ್ಣ ವಿಧಾನಸೌಧದ ಸೆಂಟ್ರಲ್ ಹಾಲ್‌ನಲ್ಲಿ ಬುಧವಾರ ರಾಜ್ಯದ ಕೆರೆ ಬಳಕೆದಾರರ ಸಂಘಗಳ ಪದಾಧಿಕಾರಿಗಳ ಕಾರ್ಯಾಗಾರ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಯಾಗಾರಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಕೆರೆ ಬಳಕೆದಾರರ ಸಂಘಗಳ ಕಾರ್ಯಾಗಾರದ ಕೈಪಿಡಿ ಹಾಗೂ ‘ನೀರಿದ್ದರೆ ನಾಳೆ’ ಯೋಜನೆಯ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.

ರಾಜ್ಯದಲ್ಲಿ ಸುಮಾರು 44 ಸಾವಿರ ಕೆರೆಗಳಿದ್ದು, ಅವುಗಳಲ್ಲಿ 20 ಸಾವಿರಕ್ಕೂ ಹೆಚ್ಚು ಕೆರೆಗಳು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕೆರೆಗಳ ಸರ್ವೇ, ಒತ್ತುವರಿ ತೆರವು ಹಾಗೂ ಪುನಶ್ಚೇತನಕ್ಕೆ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ತಿಳಿಸಲಾಯಿತು.

ಸಾಂಪ್ರದಾಯಿಕ ನೀರಿನ ಮೂಲಗಳಾದ ಕೆರೆಗಳ ಸಂರಕ್ಷಣೆ ಸರ್ಕಾರದ ಆದ್ಯತೆಯಾಗಬೇಕು. ಈ ಹಿನ್ನೆಲೆ ಕಾರ್ಯಾಗಾರದಲ್ಲಿ ಕೆರೆಗಳ ಜತನ, ಸದ್ಬಳಕೆ ಹಾಗೂ ಆದಾಯ ಮೂಲಗಳಾಗಿ ಬಳಸುವ ಸಾಧ್ಯತೆಗಳ ಕುರಿತು ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

Related posts