ಬೆಳಗಾವಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ; ಇಬ್ಬರು ಆರೋಪಿಗಳ ಬಂಧನ

ಬೆಳಗಾವಿ: ಜಿಲ್ಲೆಯನ್ನು ಬೆಚ್ಚಿಬೀಳಿಸಿರುವ ಕ್ರೂರ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿಯನ್ನು ಕಬ್ಬಿನ ಹೊಲಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಣಿಕಂಠ ದಿನ್ನಿಮನಿ ಹಾಗೂ ಈರಣ್ಣ ಸಂಕಮ್ಮನವರ್ ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬನು ನೇರವಾಗಿ ದೌರ್ಜನ್ಯಕ್ಕೆ ಮುಂದಾಗಿದ್ದರೆ, ಇನ್ನೊಬ್ಬನು ಕಾವಲು ಕಾಯುವ ಮೂಲಕ ಅಪರಾಧಕ್ಕೆ ಸಹಕಾರ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆಗೆ ಸಂಬಂಧಿಸಿದಂತೆ, ಹಿಟ್ಟಿನ ಗಿರಣಿಯಿಂದ ಮನೆಗೆ ಹಿಂತಿರುಗುತ್ತಿದ್ದ ಏಳನೇ ತರಗತಿಯ ಬಾಲಕಿಯನ್ನು ಆರೋಪಿಗಳು ಮಧ್ಯದಲ್ಲಿ ತಡೆದು, ಕಬ್ಬಿನ ಹೊಲಕ್ಕೆ ಎಳೆದುಕೊಂಡು ಹೋಗಿ ಅಮಾನುಷ ಕೃತ್ಯ ಎಸಗಿದ್ದಾರೆ.
ಬಾಲಕಿಯ ಮನೆಯಿಂದ ಕೇವಲ 300 ಮೀಟರ್ ದೂರದಲ್ಲೇ ಈ ಘಟನೆ ನಡೆದಿರುವುದು ಇನ್ನಷ್ಟು ಆತಂಕ ಹುಟ್ಟಿಸಿದೆ.

ಕುಟುಂಬಕ್ಕೆ ಆರೋಪಿಗಳು ಜೀವ ಬೆದರಿಕೆ ಹಾಕಿರುವ ಕಾರಣದಿಂದ ದೂರು ತಡವಾಗಿ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 1ರಂದು ದೂರು ದಾಖಲಾಗುತ್ತಿದ್ದಂತೆಯೇ, ಮುರಗೋಡ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದು, ನಂತರ ಮತ್ತೊಬ್ಬನನ್ನೂ ಹಿಡಿದಿದ್ದಾರೆ. ಘಟನೆಯ ಪರಿಶೀಲನೆಗಾಗಿ ಮಹಿಳಾ ಪೊಲೀಸ್ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಎಸ್ಪಿ ಭೀಮಾಶಂಕರ್ ಗುಲೇದ್ ತಿಳಿಸಿದ್ದಾರೆ.

Related posts