ಮುಂಬೈ: ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಹಾರರ್–ಹಾಸ್ಯ ಚಿತ್ರ ‘ಭೂತ್ ಬಾಂಗ್ಲಾ’ ಮೇ 15, 2026ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಪ್ರಕಟಿಸಿದ್ದಾರೆ.
ಈ ಚಿತ್ರದ ವಿಶೇಷತೆ ಎಂದರೆ, 14 ವರ್ಷಗಳ ನಂತರ ನಿರ್ದೇಶಕ ಪ್ರಿಯದರ್ಶನ್ ಮತ್ತು ನಟ ಅಕ್ಷಯ್ ಕುಮಾರ್ ಮತ್ತೆ ಒಂದಾಗಿರುವುದು. ಹಾರರ್–ಹಾಸ್ಯ ಪ್ರಕಾರದಲ್ಲಿ ತಮ್ಮದೇ ಶೈಲಿಯಿಂದ ಗುರುತಿಸಿಕೊಂಡಿರುವ ಈ ಜೋಡಿ, ಮತ್ತೊಮ್ಮೆ ಹಾಸ್ಯ ಮತ್ತು ಭಯದ ಸಮತೋಲನದ ಮನರಂಜನೆ ನೀಡಲು ಸಜ್ಜಾಗಿದೆ.
ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ನಿರ್ಮಾಪಕರು, “ಬಂಗಲೆ ಸೆ ಏಕ್ ಖಬರ್ ಆಯಿ ಹೈ! 2026 ಮೇ 15ರಂದು ಚಿತ್ರಮಂದಿರಗಳ ಬಾಗಿಲು ತೆರೆಯಲಿದೆ” ಎಂದು ಬರೆದು ಬಿಡುಗಡೆ ದಿನಾಂಕ ಘೋಷಿಸಿದರು.
ಚಿತ್ರದಲ್ಲಿ ಟಬು, ಪರೇಶ್ ರಾವಲ್, ರಾಜ್ಪಾಲ್ ಯಾದವ್, ಜಿಶು ಸೇನ್ಗುಪ್ತಾ, ಅಸ್ರಾನಿ ಹಾಗೂ ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಪ್ರಮುಖ ದೃಶ್ಯಗಳನ್ನು ರಾಜಸ್ಥಾನ, ಜೈಪುರ ಮತ್ತು ಹೈದರಾಬಾದ್ನಲ್ಲಿ ಚಿತ್ರೀಕರಿಸಲಾಗಿದ್ದು, ದೃಶ್ಯ ವಿನ್ಯಾಸಕ್ಕೆ ವಿಶೇಷ ಒತ್ತು ನೀಡಲಾಗಿದೆ.
ನಿಗೂಢ ದೆವ್ವದ ಬಂಗಲೆ ಮತ್ತು ಅದರ ಸುತ್ತ ನಡೆಯುವ ಗೊಂದಲಗಳೇ ಚಿತ್ರದ ಕಥಾವಸ್ತು. ಪ್ರಿಯದರ್ಶನ್ ಅವರ ಹಿಂದಿನ ಹಿಟ್ ಹಾರರ್–ಹಾಸ್ಯ ಚಿತ್ರಗಳಂತೆ, ‘ಭೂತ್ ಬಾಂಗ್ಲಾ’ ಕೂಡ ಹಗುರವಾದ ಭಯ ಮತ್ತು ಸ್ಲ್ಯಾಪ್ಸ್ಟಿಕ್ ಹಾಸ್ಯದ ಮಿಶ್ರಣವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ಹಾರರ್–ಹಾಸ್ಯ ಚಿತ್ರಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿರುವ ಹಿನ್ನೆಲೆ, ‘ಭೂತ್ ಬಾಂಗ್ಲಾ’ ವಾಣಿಜ್ಯ ಮನರಂಜನೆಯ ಹಳೆಯ ಶೈಲಿಗೆ ಮರಳುವ ಪ್ರಯತ್ನವೆಂದು ಸಿನಿವಲಯ ವಿಶ್ಲೇಷಿಸಿದೆ.
ಪ್ರಿಯದರ್ಶನ್ ನಿರ್ದೇಶನದ ಈ ಚಿತ್ರವನ್ನು ಶೋಭಾ ಕಪೂರ್, ಏಕ್ತಾ ಆರ್. ಕಪೂರ್ ಹಾಗೂ ಅಕ್ಷಯ್ ಕುಮಾರ್ ಅವರ ‘ಕೇಪ್ ಆಫ್ ಗುಡ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ನಿರ್ಮಿಸಿದೆ. ಫಾರಾ ಶೇಖ್ ಮತ್ತು ವೇದಾಂತ್ ಬಾಲಿ ಸಹ-ನಿರ್ಮಾಪಕರಾಗಿದ್ದು, ಕಥೆಯನ್ನು ಆಕಾಶ್ ಎ. ಕೌಶಿಕ್ ಬರೆದಿದ್ದಾರೆ. ಚಿತ್ರಕಥೆಯನ್ನು ರೋಹನ್ ಶಂಕರ್, ಅಭಿಲಾಷ್ ನಾಯರ್ ಮತ್ತು ಪ್ರಿಯದರ್ಶನ್ ರಚಿಸಿದ್ದು, ಸಂಭಾಷಣೆಯನ್ನು ರೋಹನ್ ಶಂಕರ್ ನೀಡಿದ್ದಾರೆ. ಈ ಚಿತ್ರವನ್ನು ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ
