ಹುಲಿಗಳ ಸಾವಿನ ಪ್ರತಿಧ್ವನಿ; ಮೂವರು ಅರಣ್ಯ ಅಧಿಕಾರಿಗಳಿಗೆ ಕಡ್ಡಾಯ ರಜೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ಹುಲಿ ಹಾಗೂ ಅದರ ನಾಲ್ಕು ಮರಿಗಳ ಸಾವಿಗೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ, ಮೂರು ಹಿರಿಯ ಅರಣ್ಯ ಅಧಿಕಾರಿಗಳನ್ನು ‘ಕಡ್ಡಾಯ ರಜೆ’ಯ ಮೇಲೆ ಕಳುಹಿಸಿದೆ.

ಈ ಸಂಬಂಧ ಸೋಮವಾರ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಧಿಕೃತ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. ಹುಲಿಗಳ ಸಾವು ಸ್ಥಳೀಯ ಅರಣ್ಯ ಅಧಿಕಾರಿಗಳ ಕಣ್ಣಿಂದ ದೂರವಿದ್ದದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.

ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ. ಚಕ್ರಪಾಣಿ, ಹನೂರು ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಜಾನನ ಹೆಗಡೆ, ಹೂಗ್ಯಂ ವಲಯದ ಉಸ್ತುವಾರಿ ಉಪವಿಭಾಗಾಧಿಕಾರಿ ಮಾದೇಶ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹುಲಿಗಳ ಶವಗಳು ಕಾಡು ಶಿಬಿರದಿಂದ ಕೇವಲ 800 ಮೀ. ದೂರದಲ್ಲಿ ಪತ್ತೆಯಾಗಿದ್ದರೂ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇರದಿರುವುದು, ಮತ್ತು ಬೇಟೆ ವಿರೋಧಿ ಶಿಬಿರದ ಸಿಬ್ಬಂದಿಗೆ ಮೂರು ತಿಂಗಳಿನಿಂದ ವೇತನವೇ ನೀಡದಿರುವುದು ಗಣನೀಯ ವಿಫಲತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಡಿಸಿಎಫ್‌ಗಳ ವಿರುದ್ಧ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎನ್ನಲಾಗಿದೆ.

Related posts