ಹಣವಂತರೇ ಆಗಿರಲಿ, ಬಡವರೇ ಇರಲಿ. ಪರಿಸ್ಥಿತಿಯ ಹೊಡೆತದಿಂದ ನಲುಗಿರುವ ಎಲ್ಲರೂ ಈಗ ಅಸಹಾಯಕರೇ.. ಈಗ ಹೃದಯ ಶ್ರೀಮಂತಿಕೆ ಮೆರೆಯುವವರು ಕೆಲವೇ ಮಂದಿ. ಆ ಆಪತ್ಭಾಂಧವರೇ ನಿಜವಾದ ಶ್ರೀಮಂತರು.
ಬೆಂಗಳೂರು: ಮಹಾಮರಿ ಕೊರೋನಾದಿಂದಾಗಿ ನಾಡಿನ ಜನ ಸಂಕಷ್ಟಕ್ಕೊಳಗಾಗಿದ್ದಾರೆ. ನಿತ್ಯವೂ ಮರಣ ಮೃದಂಗ ಕೇಳಿಬರುತ್ತಿರುವುದರಿಂದಾಗಿ ಜನಭೀತಿಗೊಳಗಾಗಿದ್ದಾರೆ. ಕೊರೋನಾ ನಿಯಂತ್ತಣ ಸಂಬಂಧ ಲಾಕ್‌ಡೌನ್ ಜಾರಿಯಲ್ಲಿರುವುದರಿಂದಾಗಿ ಲಕ್ಷಾಂತರ ಜನ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಕೆಲಸವೂ ಇಲ್ಲದೆ, ಊಟ ತಿಂಡಿಯೂ ಸಿಗದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಇಂತಹಾ ಅಸಹಾಯಕರಿಗೆ ಸಹಾಯಹಸ್ತ ಚಾಚುತ್ತಿದೆ ಬೆಂಗಳೂರಿನ Anwar Sharieff Foundation and Karol Foundation.
ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸಂಕಷ್ಟಕ್ಕೆ ಸಿಲಿಕಿದ ಕುಟುಂಬಗಳಿಗೆ ಹಲವಾರು ವರ್ಷಗಳಿಂದ ನೆರವು ನೀಡುತ್ತಾ ಬಂದಿರುವ ಸಮಾಜ ಸೇವಕ ಉಸ್ಮಾನ್ ಷರೀಫ್ ಈ ಬಾರಿ ಕೊರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಉಸ್ತುವಾರಿಯ ಅನ್ವರ್ ಷರೀಫ್ ಫೌಂಡೇಶನ್ ಮೂಲಕ ನೆರವಿನ ಕಾರ್ಯಕ್ಕೆ ಧುಮುಕಿದ್ದಾರೆ.
ಉದ್ಯಾನನಗರಿಯ ಮಾರುತಿ ಸೇವಾನಗರ, ಫ್ರೇಜರ್ ಟೌನ್, ರಿಚಾರ್ಡ್ ಪಾರ್ಕ್, ಕಾಕ್ಸ್ ಟೌನ್, ಶಿವಾಜಿನಗರ, ಬೆನ್ಸನ್ ಟೌನ್, ಹಲಸೂರು, ಚಾಮರಾಜಪೇಟೆ, ಬಾಣಸವಾಡಿ, ಕೆ.ಆರ್.ಪುರ, ಆರ್.ಟಿ.ನಗರ, ಹೆಬ್ಬಾಳ ಮೊದಲಾದ ಬಡಾವಣೆಗಳಲ್ಲಿ ಅಸಹಾಯಕರಿರುವ ಸ್ಥಳ ಗುರುತಿಸಿ ಅಗತ್ಯ ಪಡಿತರ ವಸ್ತುಗಳನ್ನು ಈ ಫೌಂಡೇಶನ್ ವತಿಯಿಂದ ವಿತರಿಸಲಾಗುತ್ತಿದೆ. ಮೈಸೂರು ರಸ್ತೆ, ಕುಂಬಳಗೋಡು, ದೊಡ್ಡ ಆಲದಮರ, ಕೆಂಗೇರಿ ಸುತ್ತಮುತ್ತಲ ಪ್ರದೇಶಗಳ ಜನರ ಬಾಳಲ್ಲೂ ಈ ತಂಡದ ಸದಸ್ಯರು ಬೆಳಕು ಹರಿಸಿದ್ದಾರೆ.
ಸರ್ಕಾರ ಮತ್ತು ಬಿಬಿಎಂಪಿ ಜೊತೆ ಸಾಥ್
ಲಾಕ್ ಡೌನ್ ಸಂದರ್ಭದಲ್ಲಿ ಆಹಾರಕ್ಕಾಗಿ ಪರದಾಡುತ್ತಿರುವ ಮಂದಿ ಬಿಬಿಎಂಪಿ ಕಂಟ್ರೋಲ್ ರೂಮ್, ಪೊಲೀಸ್ ಕಂಟ್ರೋಲ್ ರೂಮ್’ಗಳಿಗೆ ಕರೆ ಮಾಡುವುದು ಸಾಮಾನ್ಯ. ಆ ರೀತಿ ಕರೆ ಬಂದಲ್ಲಿ ಅಂಥವರ ಮಾಹಿತಿ ಸಂಗ್ರಹಿಸಿ ಈ ನಿಯಂತ್ರಣಾ ಕೊಠಡಿ ಸಿಬ್ಬಂದಿ ಈ ಅನ್ವರ್ ಷರೀಫ್ ಫ್ಯಾಉಂಡೇಷನ್ ಅಥವಾ ಕರೋಲ್ ಫೌಂಡೇಶನ್’ಗೆ ಮಾಹಿತಿ ರವಾನಿಸುತ್ತಾರೆ. ತಕ್ಷಣವೇ ಉಸ್ಮಾನ್ ಷರೀಫ್ ತಂಡ ಅಸಹಾಯಕರಿರುವ ಸ್ಥಳಕ್ಕೆ ಧಾವಿಸಿ ಆಹಾರ ನೀಡಿ ಅಥವಾ ಅಗತ್ಯ ಪಡಿತರ ನೀಡಿ ಮಾನವೀಯ ಕೆಲಸ ಮಾಡುತ್ತಿದ್ದಾರೆ.
ಲಾಕ್ ಡೌನ್ ಆರಂಭವಾದಾಗ ಬೆಂಗಳೂರು ಪೂರ್ವ ವಿಭಾಗದಲ್ಲಿ ಸುಮಾರು 12 ತಂಡಗಳಲ್ಲಿ ಅಗತ್ಯ ಸಾಮಾಗ್ರಿ ವಿತರಣೆ ಆರಂಭಿಸಲಾಗಿತ್ತು. ಏಪ್ರಿಲ್ ಮೊದಲ ವಾರದಲ್ಲಿ ಬೆಂಗಳೂರಿನ ಬಹುತೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಸಾವಿರಾರು ಕುಟುಂಬಗಳಿಗೆ ಅಕ್ಕಿ, ಗೋದಿ, ಹಿಟ್ಟು, ಹಾಗೂ ವಿವಿಧ ಅಡುಗೆ ಸಾಮಾಗ್ರಿಗಳ ಕಿಟ್’ಗಳನ್ನೂ ವಿತರಿಸಲಾಗಿದೆ ಎಂದು ಉಸ್ಮಾನ್ ಷರೀಫ್ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಸಾರ್ವಜನಿಕರ ಸೇವೆಯಲ್ಲಿ ನಿರತವಾದಾಗ ಆ ನಾಗರಿಕ ಸೇವಾಕರ್ತರ ಅಗತ್ಯಗಳಿಗೆ ಸ್ಪಂದಿಸಿ ಮಾನವೀಯ ಕೆಲಸ ಮಾಡುತ್ತಿವೆ. ಇವರ ಈ ಕಾರ್ಯಕ್ಕೆ ಪೊಲೀಸ್ ಅಧಿಕಾರಿಗಳು, ಮಾನವ ಹಕ್ಕು ಸಂಘಟನೆಗಳ ಮುಖ್ಯಸ್ಥರು, ಜನಪ್ರತಿನಿಧಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.