ಕೊರೋನಾ ಸೋಂಕಿತ ಮಹಿಳೆಯ ಶವ ಅಂತ್ಯಕ್ರಿಯೆಗೆ ಎಲ್ಲೆಲ್ಲೂ ವಿರೋಧ; ನನ್ನ ಮನೆ ಮುಂದೆಯೇ ಸಂಸ್ಕಾರ ನಡೆಸಿ ಎಂದ ಶಾಸಕ.. ಜನಪ್ರತಿನಿಧಿಯ ಮಾನವೀಯತೆಗೆ ಇಡೀ ನಾಡೇ ಸೆಲ್ಯೂಟ್..
ಮಂಗಳೂರು: ದೇಶದೆಲ್ಲೆಡೆ ಕೊರೋನಾ ಆತಂಕ ಆವರಿಸಿಕೊಂಡಿದೆ. ಕೊರೋನಾ ಹರಡುತ್ತಲೇ ಇದ್ದು ಜನ ಬೆಚ್ಚಿಬಿದ್ದಿದ್ದಾರೆ. ಅದರಲ್ಲೂ ಕೊರೋನಾ ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದರೆ ಶವ ಸಂಸ್ಕಾರ ಮಾಡಲೂ ಜನ ಹೆದರುತ್ತಿದ್ದಾರೆ. ಬಹುತೇಕ ಕಡೆ ಅಧಿಕಾರಿಗಳೇ ಶವ ಸಂಸ್ಕಾರ ನಡೆಸಿದ ಪ್ರಸಂಗವೂ ಸುದ್ದಿಯಾಗಿವೆ.
ಅತ್ತ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಅಪರೂಪದ ಪ್ರಸಂಗವೊಂದು ನಡೆದಿದೆ. ಶವ ಸಂಸ್ಕಾರಕ್ಕೆ ತಮ್ಮದೇ ಜಾಮೀನು ಬಳಸಿ ಎನ್ನುವ ಮೂಲಕ ಶಾಸಕರು ಮಾನವೀಯತೆ ಮೆರೆದಿದ್ದಾರೆ. ಇದೆ ವೇಳೆ ಮಾನವೀಯತೆ ಮೆರೆದ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ರಾಜೇಶ್ ನಾಯ್ಕ್ ಅವರ ಗುಣಗಾನ ಸಾಗಿದೆ.
ಏನಿದು ಅಚ್ಚರಿ?
ಕೊರೋನಾ ಆತಂಕದ ಪಟ್ಟಿಯಲ್ಲಿ ಕರಾವಳಿಯೂ ಇದೆ. ಅದರಲ್ಲೂ ಬಂಟ್ವಾಳದಲ್ಲಿ ಮಹಿಳೆ ಬಲಿಯಾದ ನಂತರ ಆಕೆಯ ಸಂಬಂಧಿಯೂ ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಎಪ್ರಿಲ್ 19 ರಂದು ಮೃತಪಟ್ಟ ಮಹಿಳೆಯ ಮೃತದೇಹದ ಅಂತ್ಯಸಂಸ್ಕಾರವನ್ನು ಮಂಗಳೂರಿನಲ್ಲಿ ನಡೆಸಿದಾಗ ಸ್ಥಳೀಯ ಜನರು ಪ್ರತಿಭಟಿಸಿದ್ದರು. ಹಾಗಾಗಿ ಗುರುವಾರ ಮೃತ ಪಟ್ಟ ಮಹಿಳೆಯ ಶವ ಸಂಸ್ಕಾರವು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿತು.
ಮಂಗಳೂರಿನ ಎರಡು ಮೂರು ಕಡೆಗಳಲ್ಲಿ ಇದಕ್ಕೆ ವಿರೋಧ ವ್ಯಕ್ತವಾಯಿತು. ಅನಂತರ ಬಂಟ್ವಾಳದಲ್ಲಿ ಈ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಯಿತು. ಅಲ್ಲಿಯೂ ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ವಿಚಾರ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಅವರ ಗಮನಕ್ಕೆ ಬಂತು. ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಮಹಿಳೆಯ ಶವ ಅನಾಥವಾಗಬಾರದೆಂಬ ಕಾರಣಕ್ಕಾಗಿ ಶಾಸಕ ರಾಜೇಶ್ ನಾಯ್ಕ್ ಅಪರೂಪದಲ್ಲಿ ಅಪರೂಪ ಎಂಬಂತಹಾ ತೀರ್ಮಾನ ಕೈಗೊಂಡು ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.
ತಮ್ಮ ಕ್ಷೇತ್ರದ ನಿವಾಸಿಯ ಶವ ಸಂಸ್ಕಾರ ಎಲ್ಲೂ ಸಾಧ್ಯವಾಗದಿದ್ದರೆ ತಮ್ಮ ಮನೆ ಸಮೀಪವೇ ಅಂತ್ಯಕ್ರಿಯೆ ನಡೆಸಲಿ ಎಂದು ಶಾಸಕರು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಬಳಿ ಹೇಳಿಕೊಂಡರು. ಶಾಸಕರ ಈ ಹೇಳಿಕೆಯಿಂದ ಅಧಿಕಾರಿಗಳು ಗಲಿಬಿಲಿಗೊಂಡರು. ಆದರೂ ತರಾತುರಿಯಲ್ಲಿ ಕ್ರಮಕ್ಕೆ ಮುಂದಾದ ಅಧಿಕಾರಿಗಳು ಈ ಮಹಿಳೆಯ ಶವಸಂಸ್ಕಾರ ನೆರವೇರಿಸಿದರು.