ನಕಲಿ ಬಿಡಿ ಬೀಜ ದಾಸ್ತಾನು: ಸುಮಾರು 6 ಕೋಟಿ ರೂ ಮೌಲ್ಯದ ಬೀಜ ವಶ

ಬೆಂಗಳೂರು: ಮುಂಗಾರು ಬಿತ್ತನೆಗೆ ಸಿದ್ಧವಾಗಿರುವ ರೈತರಿಗೆ ಯಾವುದೇ ರೀತಿಯಲ್ಲಿ ಬಿತ್ತನೆಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ಕೃಷಿ ಇಲಾಖೆ ಸಕಲ ಕ್ರಮ ಕೈಗೊಂಡಿದೆ. ಇದೇ ವೇಳೆ ನಕಲಿ ಬೀಜ, ಗೊಬ್ಬರ ಹಾವಳಿಗೆ ಕಡಿವಾಣ ಹಾಕಲು ಅಧಿಕಾರಿಗಳ ಪಡೆಯನ್ನುಸರ್ಕಾರ ಸಜ್ಜುಗೊಳಿಸಿದೆ. ಈ ಕೃಷಿ ವಿಚಕ್ಷಣಾ ತಂಡ ಹಾಗೂ ಕೃಷಿ ಅಧಿಕಾರಿಗಳು ಸತತ ಬಿರುಸಿನ ಕಾರ್ಯಾಚರಣೆಯಲ್ಲಿ ತೊಡಗಿದ್ದು ಬೀಜ ಅಕ್ರಮವನ್ನು ಬೇಧಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ನಕಲಿ ಬಿಡಿ ಬೀಜಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡಲು ಸಿದ್ಧವಾಗಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಈ ತಂಡ ಸುಮಾರು ಆರು ಕೋಟಿ ರೂಪಾಯಿ ಮೌಲ್ಯದ ಅಕ್ರಮ ದಾಸ್ತಾನನ್ನು ವಶಪಡಿಸಿಕೊಂಡಿದೆ.

ಹಾವೇರಿ ಜಿಲ್ಲಾ ಜಂಟಿ ನಿರ್ದೇಶಕ ಮಂಜುನಾಥ್ ಹಾಗೂ ಸಿಪಿಐ ಭಾಗ್ಯವತಿ ನೇತೃತ್ವದ ಜಂಟಿ ತಂಡ ಪೊಲೀಸ್ ಅಧಿಕಾರಿಗಳ ನೆರವಿನೊಂದಿಗೆ ಗುರುವಾರ ರಾತ್ರಿ ಕ್ಷಿಪ್ರ ಕಾರ್ಯಾಚರಣೆಗಿಳಿದರು. ಬ್ಯಾಡಗಿ ಪಟ್ಟಣದ ಅಡ್ಡೆಯೊಂದಕ್ಕೆ ಲಗ್ಗೆ ಹಾಕಿದ ಅಧಿಕಾರಿಗಳು ಅಲ್ಲಿ ಸಾವಿರಾರು ಮೂಟೆ ಬೀಜ ದಾಸ್ತಾನನ್ನು ಪತ್ತೆ ಮಾಡಿದ್ದಾರೆ. ‌

ಸಮೀಪದ ಮತ್ತೊಂದು ಕೇಂದ್ರದ ಮೇಲೂ ಇದೆ ತಂಡ ದಾಳಿ ಮಾಡಿ ಅಲ್ಲೂ ಕೊಟ್ಯಾನ್ತರ ರೂಪಾಯಿ ಮೌಲ್ಯದ ಬಿಡಿಬೀಜಗಳನ್ನು ವಶಪಡಿಸಿಕೊಂಡಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂಬಂಧ ಬ್ಯಾಡಗಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿಗಳ‌ ನ್ಯಾಯಾಲಯದಲ್ಲಿ‌ ಪ್ರಕರಣ ದಾಖಲಿಸಲಾಗಿದೆ.

Related posts