ಬೆಂಗಳೂರು: ಮಾಜಿ ಭೂಗತ ದೊರೆ ಮುತ್ತಪ್ಪ ರೈ ಹೆಸರನ್ನು ಕೇಳದವರಿಲ್ಲ. ಒಂದೊಮ್ಮೆ ಪಾತಕ ಜಗತ್ತನ್ನು ಆಳುತ್ತಾ, ಇಡೀ ಬೆಂಗಳೂರನ್ನೇ ನಡುಗಿಸುತ್ತಿದ್ದ ಡಾನ್ – ಮುತ್ತಪ್ಪ ರೈ.
ದಕ್ಷಿಣಕನ್ನಡ ಜಿಲ್ಲೆ ಪುತ್ತೂರು ಮೂಲದ ರೈ, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಉತ್ತಮ ವಿದ್ಯಾರ್ಥಿಯಾಗಿದ್ದರು. ವಿಜಯಾ ಬ್ಯಾಂಕ್ ಉದ್ಯೋಗಿಯೂ ಆಗಿದ್ದ ಮುತ್ತಪ್ಪ ರೈ ಅಚಾನಕ್ಕಾಗಿ ಪಾತಕ ಲೋಕಕ್ಕೆ ಎಂಟ್ರಿ ಕೊಟ್ಟಿದ್ದೇ ಒಂದು ಇತಿಹಾಸ. ರೌಡಿಸಂ ಫೀಲ್ಡ್’ನಲ್ಲಿ ತನ್ನದೇ ಹವಾ ಸೃಷ್ಟಿಸಿ ಅನೇಕ ಡಾನ್’ಗಳ ಯುಗಾಂತ್ಯಕ್ಕೆ ಕಾರಣರಾಗಿ ವಿದೇಶಕ್ಕೆ ಪಲಾಯನವಾಗಿದ್ದ ಮುತ್ತಪ್ಪ ರೈ ಮತ್ತೆ ಭಾರತಕ್ಕೆ ವಾಪಸಾಗಿದ್ದೇ ಅರೆಸ್ಟ್ ಆಗಿ.
2002ರಲ್ಲಿ ದುಬೈನಲ್ಲಿ ಬಂಧನಕ್ಕೊಳಗಾಗಿದ್ದ ಮುತ್ತಪ್ಪ ರೈಯನ್ನು ಆಗ ಬೆಂಗಳೂರಿನಲ್ಲಿ ಡಿಸಿಪಿಯಾಗಿದ್ದ ರವೀಂದ್ರಪ್ರಸಾದ್, ಇನ್’ಸ್ಪೆಕ್ಟರ್ ವಿನಯ್ ಗಾವಂಕರ್ ಹಾಗೂ ಉಮೇಶ್ ಅವರನ್ನೊಳಗೊಂಡ ಕರ್ನಾಟಕ ಪೊಲೀಸರು ಭಾರತಕ್ಕೆ ಕರೆ ತಂದಿದ್ದರು. ಆವರೆಗೂ ದಾವೂದ್ ಬಂಟರೇ ಇರಲಿ.., ಬೆಂಗಳೂರಿನ ಅದೆಂತಾ ಡಾನ್’ಗಳೇ ಇರಲಿ.. ಯಾರದೆರೂ ತಲೆ ತಗ್ಗಿಸದ ಮುತ್ತಪ್ಪ ರೈ, ತನ್ನ ಪಾತಕ ಇತಿಹಾಸದಲ್ಲೇ ಬೆದರಿದ್ದು ಈ ಎನ್ಕೌಂಟರ್ ಸ್ಪೆಷಲಿಸ್ಟ್’ಗಳಾದ ವಿನಯ್ ಗಾವಂಕರ್ ಮತ್ತು ಉಮೇಶ್’ಗೆ ಮಾತ್ರ. ದುಬೈನಿಂದ ಬೆಂಗಳೂರಿಗೆ ಬರುವ ಮಧ್ಯೆ ಅವೆಷ್ಟು ಬಾರಿ ಮುತ್ತಪ್ಪ ರೈ ಈ ಪೊಲೀಸ್ ಅಧಿಕಾರಿಗಳ ಕಾಲಿಗೆ ಬಿದ್ದು ಪ್ರಾಣ ಭಿಕ್ಷೆಗಾಗಿ ಅಂಗಲಾಚಿದ್ದಾರೋ ಅವರಿಗೇ ಗೊತ್ತಿಲ್ಲವಂತೆ.
ಗಾವಂಕರ್ ಅವರೇ ನನ್ನ ಹೀರೋ..
ಕೆಲ ವರ್ಷಗಳ ಹಿಂದೆ ಉದಯ ನ್ಯೂಸ್ ಪತ್ರಕರ್ತರ ತಂಡ ಮುತ್ತಪ್ಪ ರೈ ಅವರನ್ನು ಭೇಟಿಯಾದಾಗ ಅವರು ತನ್ನ ಬದುಕಿನ ಕೆಲ ವಿಚಾರಧಾರೆಗಳನ್ನು ಹರಿಯಬಿಟ್ಟಿದ್ದರು. ‘ನಾನೀಗ ಭೂಗತ ಲೋಕವನ್ನು ಆಳುತ್ತಿಲ್ಲ. ‘ಕನ್ನಡ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಲೇ, ‘ನನ್ನ ಈ ನಡೆಗೆ ಕಾರಣರಾದವರು ಮಂಗಳೂರಿನ ಖಡಕ್ ಪೊಲೀಸ್ ಅಧಿಕಾರಿ’ ಎಂಬ ಕುತೂಹಲಕಾರಿ ಸಂಗತಿಯನ್ನು ಹೇಳಿಕೊಂಡಿದ್ದರು.
ಮುತ್ತಪ್ಪ ರೈ ತನ್ನ ಬದುಕಿನುದ್ದಕ್ಕೂ ಯಾರಿಗೂ ಹೆದರಲಿಲ್ಲವಂತೆ, ಆದರೆ ಎಲ್ಲರ ಸಲಹೆಗಳನ್ನೂ ಕೇಳುತ್ತಿದ್ದರಂತೆ, ಬೇಕಾದಷ್ಟನ್ನು ಮಾತ್ರ ಅನುಸರಿಸುತ್ತಿದ್ದರಂತೆ. ಆದರೆ ಹೆದರುತ್ತಿದ್ದುದು ಮತ್ತು ತಲೆತಗ್ಗಿಸುತ್ತಿದ್ದುದು ಇನ್ಸ್’ಪೆಕ್ಟರ್ ವಿನಯ್ ಗಾವಂಕರ್’ಗೆ ಮಾತ್ರವಂತೆ. ‘ಈ ಪೊಲೀಸ್ ಅಧಿಕಾರಿ ದಕ್ಷಿಣಕನ್ನಡ ಜಿಲ್ಲೆಯ ರೌಡಿ ನಿಗ್ರಹ ದಳದ ಮುಖ್ಯಸ್ಥರಾಗಿ ಪಾತಕ ಜಗತ್ತಿಗೆ ಸಿಂಹ ಸ್ವಪ್ನರಾಗಿದ್ದರು. ಅದಾಗಲೇ ಹಲವರು ನೇಪಥ್ಯಕ್ಕೆ ಸರಿದಿದ್ದರು. ಯಾವ ಅಧಿಕಾರಿ ಮಾತಿಗೂ ಕ್ಯಾರೇ ಅನ್ನದೆ ತನ್ನದೇ ಶೈಲಿಯಲ್ಲಿ ಕಾರ್ಯಾಚರಣೆಗಿಳಿಯುತ್ತಿದ್ದ ಗಾವಂಕರ್ ಅವರಿಗೆ ಹೆದರಿ ನನ್ನ ಸಹಚರರು ಭೂಗತರಾಗುತ್ತಿದ್ದರು. ನನಗಾಗಿ ಬೇಟೆಯಾಡುತ್ತಿದ್ದ ಅದೇ ವಿನಯ್ ಗಾವಂಕರ್ ಅವರೇ ನನ್ನನ್ನು ಭಾರತಕ್ಕೆ ಕರೆ ತರಲು ದುಬೈಗೆ ಆಗಮಿಸಿದಾಗ ನಾನು ನಡುಗಿದ್ದೆ. ಮಾರ್ಗ ಮಧ್ಯೆಯೇ ನನ್ನನ್ನು ಎನಕೌಂಟರ್ ಮಾಡಿ ಮುಗಿಸ್ತಾರೋ ಎಂಬ ಭಯ ಕಾಡುತ್ತಿತ್ತು’ ಎಂದು ನೆನಪಿಸುತ್ತಿದ್ದರು ಮುತ್ತಪ್ಪ ರೈ. ಆದರೆ ಈ ಅಧಿಕಾರಿ ನನ್ನ ಪಾಲಿಗೆ ಯಮಸ್ವರೂಪಿಯಾಗಲಿಲ್ಲ. ಬದಲಾಗಿ ನನ್ನ ನಡೆಯಲ್ಲಿ ಬದಲಾವಣೆಗೆ ಮುನ್ನುಡಿ ಬರೆದಿದ್ದರು ಎಂದು ರೈ ಹೇಳಿಕೊಂಡಿದ್ದರು.
ವಿನಯ್ ಗಾವಂಕರ್ ಅವರನ್ನು ಮತ್ತೆ ಮತ್ತೆ ಭೇಟಿಯಾಗಲು ಅವಕಾಶ ಸಿಕ್ಕಿರಲಿಲ್ಲ ಎಂದಿದ್ದ ಮುತ್ತಪ್ಪ ರೈ, ಈ ಪೊಲೀಸ್ ಅಧಿಕಾರಿಯ ಕಾರ್ಯ ಶೈಲಿ ಬಗ್ಗೆ ಮನಸೋತಿದ್ದರಂತೆ. ವಿನಯ್ ಗಾವಂಕರ್ ಮಂಗಳೂರಿನಲ್ಲಿರುವವರೆಗೆ ಅವರ ಹೆಸರಿಗೆ ಕಳಂಕ ತರುವಂತಹ ಯಾವ ಕೆಲಸವನ್ನೂ ತನ್ನ ಫಾಲೋವರ್ಸ್ ಮಾಡಿಲ್ಲ. ಇದನ್ನಲ್ಲದೆ ಬೇರೆ ರೀತಿಯಲ್ಲಿ ಅವರಿಗೆ ಥ್ಯಾಂಕ್ಸ್ ಹೇಳಲು ಹೇಗೆ ಸಾಧ್ಯ? ಎಂದು ರೈ ಬಾವುಕರಾಗಿ ನುಡಿದಿದ್ದರು.
ವಿನಯ್ ಗಾವಂಕರ್ ಅವರ ಮಾತಿಗೆ ಕಟ್ಟುಬಿದ್ದು ಪಾತಕ ಜಗತ್ತಿನಿಂದಲೇ ಮುತ್ತಪ್ಪ ರೈ ದೂರ ಉಳಿದಿದ್ದರು. ಇದೀಗ ರೈ ಇಹಲೋಕವನ್ನೇ ತ್ಯಜಿಸಿದ್ದಾರೆ.
ಇದನ್ನೂ ಓದಿ.. ಮಾಜಿ ಭೂಗತ ಡಾನ್ ಮುತ್ತಪ್ಪ ರೈ ಇನ್ನಿಲ್ಲ; ಕ್ಯಾಪ್ಟನ್’ನ್ನು ಕಳೆದುಕೊಂಡ ‘ಜಯಕರ್ನಾಟಕ’