ನವದೆಹಲಿ: 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಒಲಿದಿದ್ದು, ಮಹಿಳೆಯರ ಹೈ ಜಂಪ್ ಸ್ಪರ್ಧೆಯಲ್ಲಿ ಪೂಜಾ ಕಂಚಿನ ಪದಕ ಗೆದ್ದಿದ್ದಾರೆ.
ಮಂಗಳವಾರ ನಡೆದ ಫೈನಲ್ನಲ್ಲಿ ಪೂಜಾ 1.84 ಮೀಟರ್ ಎತ್ತರವನ್ನು ಯಶಸ್ವಿಯಾಗಿ ಕ್ರಮಿಸಿ ಮೂರನೇ ಸ್ಥಾನ ಪಡೆದರು. 1.84 ಮೀಟರ್ವರೆಗಿನ ಎಲ್ಲ ಎತ್ತರಗಳನ್ನು ಅವರು ಮೊದಲ ಪ್ರಯತ್ನದಲ್ಲೇ ಕ್ರಮಿಸಿದ್ದರು.
ಚೀನಾ ಹಾಗೂ ಕಜಕಿಸ್ತಾನದ ಸ್ಪರ್ಧಿಗಳೂ 1.84 ಮೀಟರ್ ಎತ್ತರವನ್ನು ಕ್ರಮಿಸಿದ್ದರು. ಆದರೆ ಕಡಿಮೆ ಪ್ರಯತ್ನಗಳಲ್ಲಿ ಯಶಸ್ವಿಯಾದವರನ್ನು ಮೇಲಿನ ಸ್ಥಾನಕ್ಕೆ ಪರಿಗಣಿಸುವ ‘ಕೌಂಟ್ಬ್ಯಾಕ್’ ನಿಯಮದ ಆಧಾರದ ಮೇಲೆ ಪೂಜಾ ಕಂಚಿನ ಪದಕಕ್ಕೆ ಪಾತ್ರರಾದರು.

ಉಜ್ಬೇಕಿಸ್ತಾನದ ಬಾರ್ನೋಖೋನ್ ಸೈಫುಲ್ಲೇವ್ 1.90 ಮೀಟರ್ ಎತ್ತರ ಕ್ರಮಿಸಿ ಚಿನ್ನದ ಪದಕ ಗೆದ್ದರೆ, ಕಜಕಿಸ್ತಾನದ ಕ್ರಿಸ್ಟಿನಾ ಓವ್ಚಿನ್ನಿಕೋವಾ 1.87 ಮೀಟರ್ಗಳೊಂದಿಗೆ ಬೆಳ್ಳಿ ಪದಕ ಪಡೆದರು.
ಎರಡು ದಶಕಗಳ ಬಳಿಕ ಪದಕ
ಮಹಿಳೆಯರ ಹೈ ಜಂಪ್ ವಿಭಾಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಅವಧಿಯ ಬಳಿಕ ಭಾರತಕ್ಕೆ ಏಷ್ಯನ್ ಕ್ರೀಡಾಕೂಟದ ಪದಕ ಲಭಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಪೂಜಾ ಅವರ ಸಾಧನೆಯನ್ನು ಅಭಿನಂದಿಸಿರುವ ಮೋದಿ, ಇದು ಭಾರತೀಯ ಅಥ್ಲೆಟಿಕ್ಸ್ನ ಸ್ಮರಣೀಯ ಮೈಲಿಗಲ್ಲು ಎಂದು ಬಣ್ಣಿಸಿ, ಮುಂದಿನ ಸ್ಪರ್ಧೆಗಳಿಗೆ ಶುಭ ಹಾರೈಸಿದ್ದಾರೆ.
ಪ್ರಧಾನಿ ಕಚೇರಿಯು ‘ಎಕ್ಸ್’ನಲ್ಲಿ ಮಾಡಿರುವ ಪೋಸ್ಟ್ನಲ್ಲೂ ಈ ಸಾಧನೆಯನ್ನು ಭಾರತೀಯ ಅಥ್ಲೆಟಿಕ್ಸ್ಗೆ ಹೆಮ್ಮೆಯ ಕ್ಷಣ ಎಂದು ಉಲ್ಲೇಖಿಸಿದೆ.

