
ನವದೆಹಲಿ: ಆಯುಷ್ ಉತ್ಪನ್ನಗಳು ಮತ್ತು ಔಷಧೀಯ ಮಸಾಲೆಗಳ ಜಾಗತಿಕ ಪ್ರಚಾರವನ್ನು ಬಲಪಡಿಸುವ ಉದ್ದೇಶದಿಂದ ಆಯುಷ್ ಎಕ್ಸಿಲ್ ಮತ್ತು ಭಾರತೀಯ ಮಸಾಲೆ ಮಂಡಳಿ ನಡುವೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಲಾಗಿದೆ.
ಆಯುಷ್ ರಾಜ್ಯ ಸಚಿವ ಪ್ರತಾಪರಾವ್ ಜಾಧವ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ನಡೆದಿದ್ದು, ಈ ಸಹಭಾಗಿತ್ವವನ್ನು “ದೂರದೃಷ್ಟಿಯ ಮತ್ತು ಭವಿಷ್ಯಮುಖಿ ಉಪಕ್ರಮ” ಎಂದು ಅವರು ಬಣ್ಣಿಸಿದ್ದಾರೆ.
ಭಾರತದ ಆಯುರ್ವೇದ ಮತ್ತು ಔಷಧೀಯ ಮಸಾಲೆಗಳ ಶ್ರೀಮಂತ ಪರಂಪರೆಯನ್ನು ಉಲ್ಲೇಖಿಸಿದ ಜಾಧವ್, ಈ ಒಪ್ಪಂದದಿಂದ ರೈತರು, ರಫ್ತುದಾರರು, ನವೋದ್ಯಮಗಳು, ಎಂಎಸ್ಎಂಇಗಳು ಹಾಗೂ ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಬೆಂಬಲ ಸಿಗಲಿದೆ ಎಂದು ಹೇಳಿದರು.
“ಮಸಾಲೆ ಮತ್ತು ಗುಣಪಡಿಸುವಿಕೆ” ಎಂಬ ವಿಶೇಷ ಉಪಕ್ರಮದ ಮೂಲಕ ಭಾರತವನ್ನು ನೈಸರ್ಗಿಕ ಚಿಕಿತ್ಸೆ ಮತ್ತು ಸಮಗ್ರ ಸ್ವಾಸ್ಥ್ಯ ಕ್ಷೇತ್ರದಲ್ಲಿ ಜಾಗತಿಕ ನಾಯಕನನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಈ ಸಹಭಾಗಿತ್ವದಡಿ ರಫ್ತು ಪ್ರೋತ್ಸಾಹ, ಗುಣಮಟ್ಟದ ಭರವಸೆ, ವೈಜ್ಞಾನಿಕ ಮೌಲ್ಯೀಕರಣ, ಬ್ರ್ಯಾಂಡಿಂಗ್, ಪತ್ತೆಹಚ್ಚುವಿಕೆ ವ್ಯವಸ್ಥೆ ಹಾಗೂ ಆಯುರ್ವೇದ ಮತ್ತು ಮೌಲ್ಯವರ್ಧಿತ ಮಸಾಲೆ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ವಿಸ್ತರಣೆ ಕುರಿತಂತೆ ಉಭಯ ಸಂಸ್ಥೆಗಳು ಸಹಕರಿಸಲಿವೆ.
ಒಪ್ಪಂದಕ್ಕೆ ಅನುರಾಗ್ ಶರ್ಮಾ ಹಾಗೂ ಎಂ.ಎಸ್. ಮಣಿವಣ್ಣನ್ ಸಹಿ ಹಾಕಿದರು.
ಜಾಗತಿಕ ವ್ಯಾಪಾರ ಮೇಳಗಳಲ್ಲಿ ಜಂಟಿ ಭಾಗವಹಿಸುವಿಕೆ, ಸಾಮರ್ಥ್ಯ ವೃದ್ಧಿ ಹಾಗೂ ಜಾಗತಿಕ ಸ್ವಾಸ್ಥ್ಯ ಆರ್ಥಿಕತೆಯಲ್ಲಿ ಭಾರತದ ಸ್ಥಾನ ಬಲಪಡಿಸುವತ್ತ ಈ ಯೋಜನೆ ಗಮನಹರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

