ನವದೆಹಲಿ: ಟೆಲಿಕಾಂ ಗ್ರಾಹಕರ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಬಲಪಡಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ನಿಯಮಗಳನ್ನು ಪ್ರಕಟಿಸಿದೆ. ಇದರಂತೆ ಟೆಲಿಕಾಂ ಸೇವಾ ಪೂರೈಕೆದಾರರು ದಿನದ 24 ಗಂಟೆಯೂ ದೂರು ಸ್ವೀಕಾರ ವ್ಯವಸ್ಥೆ ಕಲ್ಪಿಸಬೇಕು. ಮೇಲ್ಮನವಿ ಸಲ್ಲಿಸುವ ಗಡುವನ್ನು 30 ದಿನಗಳಿಂದ 15 ದಿನಗಳಿಗೆ ಇಳಿಸಲಾಗಿದೆ.
2026ರ ಟೆಲಿಕಾಂ ಗ್ರಾಹಕರ ದೂರು ಪರಿಹಾರ (ನಾಲ್ಕನೇ ತಿದ್ದುಪಡಿ) ನಿಯಮಗಳ ಪ್ರಕಾರ, 10 ಸಾವಿರಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿರುವ ಇಂಟರ್ನೆಟ್ ಸೇವಾ ಪೂರೈಕೆದಾರರೂ ಈ ನಿಯಮಗಳ ವ್ಯಾಪ್ತಿಗೆ ಬರಲಿದ್ದಾರೆ.
ಗ್ರಾಹಕರು ವೆಬ್ಸೈಟ್, ದೂರು ಕೇಂದ್ರಗಳ ಜೊತೆಗೆ ಮೊಬೈಲ್ ಆ್ಯಪ್ ಮೂಲಕವೂ ದೂರು ಮತ್ತು ಮೇಲ್ಮನವಿ ಸಲ್ಲಿಸಬಹುದು. ದಿನದ ಕನಿಷ್ಠ 16 ಗಂಟೆಗಳ ಕಾಲ ಮಾನವ ನೆರವು ಕಡ್ಡಾಯವಾಗಿದ್ದು, ಉಳಿದ ಅವಧಿಯಲ್ಲಿ ಮಾನವ ಮೇಲ್ವಿಚಾರಣೆಯೊಂದಿಗೆ ಸ್ವಯಂಚಾಲಿತ ಹಾಗೂ ಎಐ ಆಧಾರಿತ ಸೇವೆ ಒದಗಿಸಬಹುದು.

ಅಂಗವಿಕಲರಿಗಾಗಿ ವಿಶೇಷ ಸಹಾಯವಾಣಿ ಮತ್ತು ಸುಲಭವಾಗಿ ಬಳಸಬಹುದಾದ ಡಿಜಿಟಲ್ ವ್ಯವಸ್ಥೆ ಕಲ್ಪಿಸಬೇಕು. ಮೇಲ್ಮನವಿ ಅಧಿಕಾರಿಗಳಿಗೆ ಕನಿಷ್ಠ ಐದು ವರ್ಷಗಳ ನಿರ್ವಹಣಾ ಅನುಭವ ಇರಬೇಕು ಹಾಗೂ ಸ್ವೀಕರಿಸಿದ 15 ದಿನಗಳಲ್ಲಿ ಮೇಲ್ಮನವಿಗಳನ್ನು ಇತ್ಯರ್ಥಪಡಿಸಬೇಕು.
ಗ್ರಾಹಕರ ಪ್ರತಿಕ್ರಿಯೆ ಸಮೀಕ್ಷೆ ನಡೆಸಿ ತ್ರೈಮಾಸಿಕ ವರದಿ ಪ್ರಕಟಿಸುವುದೂ ಕಡ್ಡಾಯವಾಗಿದೆ. ನಿಯಮ ಉಲ್ಲಂಘನೆ ಹಾಗೂ ವರದಿ ಸಲ್ಲಿಕೆಯಲ್ಲಿ ವಿಳಂಬವಾದರೆ ಹಣಕಾಸಿನ ದಂಡ ವಿಧಿಸುವ ಅವಕಾಶವನ್ನೂ ಟ್ರಾಯ್ ಕಲ್ಪಿಸಿದೆ.

