ಠಾಣೆಯೊಳಗೆ ಇಸ್ಪೀಟ್ ಆಟ; ಅಗತ್ಯ ಕಾನೂನು ಕ್ರಮಕ್ಕೆ ಸಚಿವ ಖರ್ಗೆ ಸೂಚನೆ

ಬೆಂಗಳೂರು: ಪೊಲೀಸ್ ಠಾಣೆಯೊಳಗೆ ಇಸ್ಪೀಟ್ ಆಡಿದ ಆರೋಪದಲ್ಲಿ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ವಾಡಿ ಠಾಣೆಯ ಐವರು ಪೊಲೀಸರನ್ನು ಇಲಾಖೆ ಅಮಾನತು ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ, ವೈರಲ್ ಆಗಿರುವ ವೀಡಿಯೋ ಹಲವು ತಿಂಗಳ ಹಿಂದೆ ನಡೆದ ಘಟನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಇಸ್ಪೀಟ್ ಆಡುತ್ತಿರುವ ವಿಡಿಯೋ ಗಮನಕ್ಕೆ ಬಂದ ತಕ್ಷಣವೇ ಈ ಕುರಿತು ವಿಚಾರಣೆ ನಡೆಸಿ ಅಗತ್ಯ ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಿದಾಗ ಇದು ಹಲವು ತಿಂಗಳ ಹಿಂದೆ ನಡೆದ ಘಟನೆ ಎನ್ನುವುದು ತಿಳಿದು ಬಂದಿರುತ್ತದೆ. ಇಸ್ಪೀಟ್ ಆಟದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಹಾಗೂ ಠಾಣೆಯ ಸಬ್ ಇನ್ಸ್ಪೆಕ್ಟರ್ ಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಯಾವುದೇ ಇಲಾಖೆಯ ಯಾವುದೇ ಸಿಬ್ಬಂದಿ, ಅಧಿಕಾರಿಗಳ ಶಿಸ್ತು ಉಲ್ಲಂಘನೆಯ ಬಗ್ಗೆ ನಮ್ಮ ಸರ್ಕಾರ ಶೂನ್ಯ ಸಹನೆ ಹೊಂದಿದೆ, ಸಾರ್ವಜನಿಕ ಸೇವೆಯಲ್ಲಿ, ಕಾನೂನು ಪಾಲನೆಯಲ್ಲಿ ಯಾವುದೇ ಲೋಪವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

Related posts