ನೇಪಾಳ ಪ್ರವಾಹದಲ್ಲಿ 5 ಸಾವಿರಕ್ಕೂ ಅಧಿಕ ಮಂದಿ ಇನ್ನೂ ನಾಪತ್ತೆ, 9 ದಿನಗಳ ಬಳಿಕ ಸುರಂಗದಿಂದ ಹೊರಬಂದ ಇಬ್ಬರು ಕಾರ್ಮಿಕರು

ಕಠ್ಮಂಡು: ನೇಪಾಳ–ಚೀನಾ ಗಡಿ ಭಾಗದಲ್ಲಿ ಸಂಭವಿಸಿದ ಹಿಮನದಿ ಕುಸಿತ ಹಾಗೂ ಭೀಕರ ಜಲಪ್ರಳಯಕ್ಕೆ ಮೃತಪಟ್ಟವರ ಸಂಖ್ಯೆ 1,250 ದಾಟಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, 5,083ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಮಣ್ಣಿನ ರಾಶಿ ಹಾಗೂ ಪ್ರವಾಹದ ನೀರು ನುಗ್ಗಿರುವ ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ನೂರಾರು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳ ಸೇನಾ ಸಿಬ್ಬಂದಿ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.

ಮಹಾ ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಹೊಸ ಭರವಸೆ ಮೂಡಿಸುವ ಘಟನೆ ನಡೆದಿದೆ. ಆಗಸ್ಟ್ 26ರಂದು ಸಂಭವಿಸಿದ ಪ್ರವಾಹದ ಬಳಿಕ ಅವಶೇಷಗಳಿಂದ ಮುಚ್ಚಿಹೋಗಿದ್ದ ತ್ರಿಶೂಲಿ–3ಎ ಜಲವಿದ್ಯುತ್ ಯೋಜನೆಯ ಸುರಂಗದಿಂದ ಒಂಬತ್ತು ದಿನಗಳ ಬಳಿಕ ಇಬ್ಬರು ಕಾರ್ಮಿಕರನ್ನು ಜೀವಂತವಾಗಿ ರಕ್ಷಿಸಲಾಗಿದೆ.

ರಕ್ಷಿಸಲಾದವರನ್ನು ಮೆಕ್ಯಾನಿಕಲ್ ಫೋರ್‌ಮನ್ ಮತ್ತು ಮೆಕ್ಯಾನಿಕಲ್ ಸೂಪರ್‌ವೈಸರ್ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಸುರಕ್ಷಿತವಾಗಿ ಹೊರಗೆ ಕರೆತಂದು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಂಧನ ಸಚಿವ ಬಿರಾಜ್ ಭಕ್ತ ಶ್ರೇಷ್ಠ ಅವರು ಓರ್ವ ಕಾರ್ಮಿಕನನ್ನು ಸುರಕ್ಷಿತವಾಗಿ ರಕ್ಷಿಸಿರುವುದನ್ನು ದೃಢಪಡಿಸಿದ್ದರು. ಬಳಿಕ ಮತ್ತೊಬ್ಬ ಕಾರ್ಮಿಕನನ್ನೂ ರಕ್ಷಿಸಲಾಗಿದೆ. “ಇನ್ನೊಬ್ಬ ವ್ಯಕ್ತಿಯನ್ನೂ ರಕ್ಷಿಸಲಾಗಿದೆ ಎಂಬ ಸುದ್ದಿ ಇದೀಗ ನಮಗೆ ಬಂದಿದೆ” ಎಂದು ಗೃಹ ಸಚಿವ ಸುಡಾನ್ ಗುರುಂಗ್ ತಿಳಿಸಿದ್ದಾರೆ.

ನೇಪಾಳದ ಸಂಕಷ್ಟಕ್ಕೆ ಸ್ಪಂದಿಸಿರುವ ಭಾರತ ಸರ್ಕಾರ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಹಾಗೂ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ತಂಡಗಳನ್ನು ನಿಯೋಜಿಸಲಾಗಿದ್ದು, ರಕ್ಷಣಾ ಸಾಮಗ್ರಿಗಳು, ವೈದ್ಯಕೀಯ ನೆರವು, ಆಹಾರ ಮತ್ತು ನೀರಿನ ಪೂರೈಕೆ ಸೇರಿದಂತೆ ಅಗತ್ಯ ನೆರವನ್ನು ರವಾನಿಸಲಾಗುತ್ತಿದೆ.

ಇದೇ ವೇಳೆ ಪ್ರವಾಹದಲ್ಲಿ ನಾಪತ್ತೆಯಾದವರನ್ನು ಗುರುತಿಸಲು ಭಾರತ ಸರ್ಕಾರ ಮಹತ್ವದ ಮಾನವೀಯ ನೆರವು ಘೋಷಿಸಿದೆ. ನಾಪತ್ತೆಯಾದವರ ಭಾರತದಲ್ಲಿರುವ ಪ್ರಥಮ ದರ್ಜೆಯ ಜೈವಿಕ ಸಂಬಂಧಿಕರಾದ ತಂದೆ-ತಾಯಿ, ಮಕ್ಕಳು ಹಾಗೂ ಸಹೋದರ-ಸಹೋದರಿಯರ ಜೈವಿಕ ಮಾದರಿಗಳನ್ನು ಸಂಗ್ರಹಿಸಿ DNA ಪ್ರೊಫೈಲಿಂಗ್ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ.

Related posts