ನವದೆಹಲಿ: ಸಂಸತ್ ಮುಂಗಾರು ಅಧಿವೇಶನದ ಮಂಗಳವಾರದ ಕಲಾಪವೂ ಆಡಳಿತಾರೂಢ ಎನ್ಡಿಎ ಹಾಗೂ ಪ್ರತಿಪಕ್ಷಗಳ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಯಿತು. ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದರೆ, ಈ ವಿಚಾರದ ಕುರಿತು ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಆಡಳಿತ ಪಕ್ಷ ತಿಳಿಸಿತು.
ಆದರೆ, ಪ್ರತಿಪಕ್ಷಗಳ ನಿರಂತರ ಪ್ರತಿಭಟನೆ ಹಾಗೂ ಘೋಷಣೆಗಳಿಂದಾಗಿ ಸದನದ ಕಲಾಪಕ್ಕೆ ಪದೇಪದೇ ಅಡ್ಡಿಯಾಯಿತು. ಗದ್ದಲದ ನಡುವೆಯೇ ಸರ್ಕಾರ ಕೇರಳ (ಹೆಸರು ಬದಲಾವಣೆ) ಮಸೂದೆ, 2026 ಹಾಗೂ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ತಿದ್ದುಪಡಿ) ಮಸೂದೆ, 2026 ಸೇರಿದಂತೆ ಪ್ರಮುಖ ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಿತು.

ಪ್ರತಿಪಕ್ಷಗಳ ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ಸದನದ ಕಲಾಪವನ್ನು ಮುಂದೂಡಲಾಯಿತು.
ಇದೇ ವೇಳೆ, ಸಂಸತ್ ಕಲಾಪಕ್ಕೆ ನಿರಂತರವಾಗಿ ಅಡ್ಡಿಪಡಿಸುತ್ತಿರುವ ಪ್ರತಿಪಕ್ಷಗಳ ಕ್ರಮವನ್ನು ಖಂಡಿಸಿ ಎನ್ಡಿಎ ಸಂಸದರು ಮಂಗಳವಾರ ಸಂಸತ್ ಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸಿದರು.

