ಪಣಜಿ: ಕನ್ನಡ ಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಅವರ 13ನೇ ಚಿತ್ರ ‘ರೂಬಿ-ಕ್ಯೂಬ್’ ಮಾನವ ಸಂಬಂಧಗಳು ಮತ್ತು ಭಾರತೀಯ ಕುಟುಂಬ ವ್ಯವಸ್ಥೆಯ ಸಂಕೀರ್ಣತೆಗಳನ್ನು ಅನಾವರಣಗೊಳಿಸಲಿದೆ. 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಮಾಧ್ಯಮ ಸಂವಾದದಲ್ಲಿ ಅವರು ಈ ವಿಷಯ ತಿಳಿಸಿದರು.
ನೈಜ ಜೀವನದ ಅನುಭವಗಳನ್ನು ಆಧರಿಸಿದ ಈ ಚಿತ್ರವು ಬದಲಾಗುತ್ತಿರುವ ಸಂಬಂಧಗಳು ಮತ್ತು ಕುಟುಂಬಗಳಲ್ಲಿನ ಭಾವನಾತ್ಮಕ ಸವಾಲುಗಳನ್ನು ಚಿತ್ರಿಸುತ್ತದೆ. ಕಥೆ ಇಷ್ಟವಾದಾಗ ಮಾತ್ರ ಸಿನಿಮಾ ಮಾಡುವುದಾಗಿ ಶೇಷಾದ್ರಿ ಹೇಳಿದರು. ಜೀವನವನ್ನು ರೂಬಿಕ್ಸ್ ಕ್ಯೂಬ್ಗೆ ಹೋಲಿಸಿದ ಅವರು, ಅದರ ವಿವಿಧ ಬಣ್ಣಗಳು ಮಾನವ ಅನುಭವಗಳ ವಿಭಿನ್ನ ಆಯಾಮಗಳನ್ನು ಪ್ರತಿಬಿಂಬಿಸುತ್ತವೆ ಎಂದರು.
ನಾಯಕ ನಟಿ ವೈನಿಧಿ ಜಗದೀಶ್ ಮಾತನಾಡಿ, ಪೋಷಕರ ಮನೆಗೆ ಮರಳುವ ಮಗಳು, ಅವರ ಸಂಬಂಧದಲ್ಲಿನ ಬದಲಾವಣೆಗಳನ್ನು ಗಮನಿಸುವಾಗ ಎದುರಿಸುವ ಭಾವನಾತ್ಮಕ ಸನ್ನಿವೇಶಗಳು ತಮ್ಮ ಪಾತ್ರದ ಮುಖ್ಯ ಅಂಶಗಳಾಗಿವೆ ಎಂದರು.

ಗಿರಿಧಾಮವೊಂದರಲ್ಲಿ ನಡೆಯುವ ಈ ಕಥೆ ಮೂರು ತಲೆಮಾರುಗಳನ್ನು ಒಟ್ಟಿಗೆ ತರುತ್ತದೆ. ಮನಶ್ಶಾಸ್ತ್ರಜ್ಞೆ ರೋಹಿಣಿ, ಮದುವೆಯ ಸವಾಲುಗಳನ್ನು ಎದುರಿಸುತ್ತಿರುವ ಮಗಳು ಚಿತ್ರಾ ಮತ್ತು ಮಾಜಿ ಪತಿ ಮೂರ್ತಿ ಮತ್ತೆ ಒಂದಾಗುತ್ತಾರೆ. ಈ ಭೇಟಿಯು ಬಗೆಹರಿಯದ ಭಾವನೆಗಳು, ಹಿಂದಿನ ಸಂಬಂಧಗಳು ಹಾಗೂ ಕುಟುಂಬದ ಜವಾಬ್ದಾರಿಗಳ ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತದೆ.
ಚಿತ್ರವು ದೈನಂದಿನ ಅನುಭವಗಳ ಮೂಲಕ ಸಮಕಾಲೀನ ಕುಟುಂಬ ಜೀವನದ ಸೂಕ್ಷ್ಮ ಆಯಾಮಗಳನ್ನು ತೆರೆದಿಡುತ್ತದೆ ಎಂದು ಶೇಷಾದ್ರಿ ತಿಳಿಸಿದರು.

