ಕಠ್ಮಂಡು: ಟಿಬೆಟ್ ಗಡಿಯ ಸಮೀಪದ ಪ್ರದೇಶಗಳಿಂದ ಬಂದ ಭಾರೀ ಪ್ರವಾಹ ಮಧ್ಯ ನೇಪಾಳದ ರಸುವಾ, ಧಾದಿಂಗ್ ಹಾಗೂ ನುವಾಕೋಟ್ ಜಿಲ್ಲೆಗಳಲ್ಲಿ ಭಾರೀ ಹಾನಿ ಉಂಟುಮಾಡಿದೆ. ಘಟನೆಯಲ್ಲಿ ಸುಮಾರು 160 ಮಂದಿ ಮೃತಪಟ್ಟಿರುವ ಶಂಕೆ ಇದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಕನಿಷ್ಠ 133 ಭಾರತೀಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಏಕಾಏಕಿ ಪ್ರವಾಹ ಉಂಟಾಗಿದೆ. ನಾಪತ್ತೆಯಾದವರಲ್ಲಿ ಹೆಚ್ಚಿನವರು ಭಾರತೀಯ ಕೈಲಾಸ ಮಾನಸಸರೋವರ ಯಾತ್ರಿಕರಾಗಿರುವ ಸಾಧ್ಯತೆ ಇದೆ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿ ತಿಳಿಸಿದೆ.
ಟಿಬೆಟ್ನ ಎತ್ತರದ ಪ್ರದೇಶದಲ್ಲಿ ಸಂಭವಿಸಿದ ಐಸ್-ರಾಕ್ ಅವಲಾಂಚ್ನಿಂದ ಹಿಮ, ಕರಗಿದ ನೀರು ಹಾಗೂ ಬಂಡೆ-ಮಣ್ಣಿನ ಅವಶೇಷಗಳು ನದಿಗೆ ಸೇರಿ ಪ್ರವಾಹ ಉಂಟಾಗಿರಬಹುದು ಎಂದು ICIMOD ತಜ್ಞರು ಹೇಳಿದ್ದಾರೆ.

ಭಾರತೀಯರ ನೆರವಿಗಾಗಿ ಕಠ್ಮಂಡುವಿನ ಭಾರತೀಯ ರಾಯಭಾರ ಕಚೇರಿ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳ ಪ್ರಧಾನಿ ಬಲೇಂದ್ರ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಂತಾಪ ಸೂಚಿಸಿದ್ದು, ಅಗತ್ಯ ಮಾನವೀಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಭಾರತವು 10 ಟನ್ ಪರಿಹಾರ ಸಾಮಗ್ರಿ ಹಾಗೂ ಔಷಧಿಗಳನ್ನು ವಾಯುಪಡೆಯ ಸಿ-130ಜೆ ವಿಮಾನದ ಮೂಲಕ ಕಠ್ಮಂಡುವಿಗೆ ಕಳುಹಿಸಿದೆ. ತಾತ್ಕಾಲಿಕ ಆಶ್ರಯ ಸಾಮಗ್ರಿ, ಕಂಬಳಿ, ಹೈಜಿನ್ ಕಿಟ್ಗಳು ಮತ್ತು ಸೌರ ದೀಪಗಳನ್ನು ಕಳುಹಿಸಲಾಗಿದೆ.

