ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: 290 ಭಾರತೀಯರಿಗಾಗಿ ಶೋಧ

ಕಠ್ಮಂಡು: ನೇಪಾಳ-ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ 392ಕ್ಕೆ ಏರಿಕೆಯಾಗಿದೆ. 1,400ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ 290 ಮಂದಿ ಭಾರತೀಯರು ಎಂದು ವರದಿಯಾಗಿದೆ.

ಮೃತಪಟ್ಟವರ ಪೈಕಿ 389 ಮಂದಿ ನೇಪಾಳದವರಾಗಿದ್ದು, ಮೂವರು ಟಿಬೆಟ್‌ನಲ್ಲಿ ಮೃತಪಟ್ಟಿದ್ದಾರೆ. ಕೆಸರು, ಬಂಡೆ ಹಾಗೂ ಅವಶೇಷಗಳ ನಡುವೆ ಸಿಲುಕಿರುವವರಿಗಾಗಿ ರಕ್ಷಣಾ ತಂಡಗಳು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿವೆ.

ನೇಪಾಳ ಪೊಲೀಸರು ಹೆಲಿಕಾಪ್ಟರ್‌ಗಳ ಮೂಲಕ 50 ವಿದೇಶಿಯರು ಸೇರಿದಂತೆ 796 ಮಂದಿಯನ್ನು ರಕ್ಷಿಸಿದ್ದಾರೆ. ಮತ್ತೂ 796 ಮಂದಿಯನ್ನು ಭೂಮಾರ್ಗದ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಕ್ಷಿಸಲಾದ ವಿದೇಶಿಯರ ರಾಷ್ಟ್ರೀಯತೆಗಳ ವಿವರವನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಹೆಲಿಕಾಪ್ಟರ್‌, ಡ್ರೋನ್‌ಗಳು ಹಾಗೂ ಭೂಮಾರ್ಗದ ರಕ್ಷಣಾ ತಂಡಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ಮುಂದುವರಿಸಿವೆ. ನಾಪತ್ತೆಯಾಗಿರುವವರ ಪತ್ತೆಗೆ ಆದ್ಯತೆ ನೀಡಲಾಗಿದ್ದು, ಅವಶೇಷಗಳ ನಡುವೆ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

ನೇಪಾಳ ಪ್ರಧಾನಿ ಬಾಲೇಂದ್ರ ಶಾ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯ ಹಾಗೂ ಬಂದ್ ಆಗಿರುವ ರಸ್ತೆಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ ಚೀನಾದ ಪ್ರಧಾನಿ ಲಿ ಕಿಯಾಂಗ್ ಗ್ಯಿರಾಂಗ್ ಪ್ರದೇಶಕ್ಕೆ ಭೇಟಿ ನೀಡಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಪರಿಶೀಲಿಸಿದ್ದಾರೆ.

Related posts