ಮೊಬೈಲ್ ಟಾರ್ಚ್‌ ಬೆಳಕಿನಲ್ಲಿ KSRTC ಬಸ್ ಸಂಚಾರ; ಇದು ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ದುಸ್ಥಿತಿ ಎಂದ ಜೆಡಿಎಸ್

ಬೆಂಗಳೂರು: ಕಲಬುರಗಿಯಿಂದ ಚಿಂಚೋಳಿಗೆ ಸಂಚರಿಸುತ್ತಿದ್ದ ಕೆಕೆಆರ್‌ಟಿಸಿ (KKRTC) ಬಸ್‌ನಲ್ಲಿ ಹೆಡ್‌ಲೈಟ್ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ನಿರ್ವಾಹಕರ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಲಾಗಿದೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ಜೆಡಿಎಸ್ ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಜೆಡಿಎಸ್, “ಇದು ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ದುಸ್ಥಿತಿ” ಎಂದು ಟೀಕಿಸಿದೆ.

“ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ಕಾಂಗ್ರೆಸ್ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ” ಎಂದು ಪಕ್ಷ ಆರೋಪಿಸಿದೆ.


ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಅನುದಾನದಲ್ಲಿ ಖರೀದಿಸಿದ ಹೊಸ ಬಸ್‌ಗಳನ್ನು ಬೇರೆ ಪ್ರದೇಶಗಳಿಗೆ ನಿಯೋಜಿಸಿ, ಗುಜರಿಗೆ ಸೇರಬೇಕಾದ ಹಳೆಯ ಬಸ್‌ಗಳನ್ನು ಚಿಂಚೋಳಿ ಭಾಗಕ್ಕೆ ಬಿಡಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.

ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ಆಡಳಿತದ ದುಸ್ಥಿತಿ ನೋಡಿ.

ಕಲಬುರಗಿಯಿಂದ ಚಿಂಚೋಳಿಗೆ ಸಂಚರಿಸುವ ಕೆಕೆಆರ್‌ಟಿಸಿ (KKRTC) ಬಸ್ಸಿನಲ್ಲಿ ಹೆಡ್‌ಲೈಟ್ ಇಲ್ಲದೆ, ನಿರ್ವಾಹಕರ ಮೊಬೈಲ್ ಟಾರ್ಚ್‌ ಬೆಳಕಿನಲ್ಲಿ ಜೀವ ಕೈಯಲ್ಲಿಡಿದು ಪ್ರಯಾಣಿಸುವ ದುಸ್ಥಿತಿ ನಿರ್ಮಾಣವಾಗಿರುವುದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ.

ಕಲ್ಯಾಣ ಕರ್ನಾಟಕ… pic.twitter.com/8rCV1khJVu

— Janata Dal Secular (@JanataDal_S) July 5, 2026

“ಸಾರಿಗೆ ಸಚಿವರು ಪ್ರಚಾರದಲ್ಲೇ ನಿರತರಾಗಿದ್ದು, ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡು, ಈ ಭಾಗಕ್ಕೆ ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಒದಗಿಸಬೇಕು” ಎಂದು ಜೆಡಿಎಸ್ ಆಗ್ರಹಿಸಿದೆ.

Related posts