ವಿಐಎಸ್ಎಲ್ ವಿಚಾರದಲ್ಲಿ ಬಿಜೆಪಿಯವರು ಕೊಟ್ಟ ಮಾತು ಉಳಿಸಿಕೊಂಡಿಲ್ಲ: ಡಿಕೆಶಿ

ಭದ್ರಾವತಿ: ಬಿಜೆಪಿ ನಾಯಕರು ಕೊಟ್ಟ ಮಾತಿನಂತೆ ಕೇಂದ್ರ ಸರ್ಕಾರದಿಂದ ವಿಐಎಸ್ಎಲ್ ಕಾರ್ಖಾನೆಗೆ ಬಂಡವಾಳ ತಂದು ಪುನರಾರಂಭ ಮಾಡಲು ವಿಫಲರಾಗಿದ್ದಾರೆ. ಅವರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದರೆ ಕೇವಲ ಅರ್ಧ ಗಂಟೆಯಲ್ಲಿ ತೀರ್ಮಾನ ಮಾಡಬಹುದು. ಆದರೆ ಈ ಬಗ್ಗೆ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ. ಹೀಗಾಗಿ ಬಿಜೆಪಿಯವರು ಈ ಜನರ ಮುಂದೆ ಬಂದು ಮತ ಕೇಳುವ ನೈತಿಕತೆ ಕಳೆದುಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹರಿಹಾಯ್ದಿದ್ದಾರೆ.

ಭದ್ರಾವತಿಯಲ್ಲಿ ಪ್ರಜಾಧ್ವನಿ ಸಮಾವೇಶಕ್ಕೂ ಮುನ್ನ ವಿಐಎಸ್ಎಲ್ ಕಾರ್ಮಿಕರ ಜತೆ ಚರ್ಚೆ ಮಾಡಿ ಅವರ ಅಳಲು ಕೇಳಿದ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಸರ್ಕಾರದ ನಿರ್ಲಕ್ಷ್ಯತನದ ಬಗ್ಗೆ ಕಿಡಿಕಾರಿದರು. ಅಲ್ಲದೆ ಈ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು ಪುನರಾರಂಭ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್, ‘ನಾವು ಮಲೆನಾಡು ಭಾಗಕ್ಕೆ ಬಂದಿದ್ದು, ಶಿವಮೊಗ್ಗ, ಭದ್ರಾವತಿಯಲ್ಲಿ ಮಾತ್ರ ನಮ್ಮ ಪಕ್ಷದ ಶಾಸಕರಾಗಿದ್ದಾರೆ. ಕಳೆದ ಚುನಾವಣೆ ನಂತರ ತೀರ್ಥಹಳ್ಳಿಯ ಮಂಜುನಾಥ್ ಗೌಡ, ಸೊರಬದ ಮಧು ಬಂಗಾರಪ್ಪ ಅವರು ಕಾಂಗ್ರೆಸ್ ಸೇರಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ ಸರ್ಕಾರವಿದೆ. ಈ ಜಿಲ್ಲೆ ಬಹಳ ನಾಯಕರನ್ನು ನೀಡಿದೆ. ರಾಜ್ಯದ ಗೃಹ ಸಚಿವರು ಈ ಜಿಲ್ಲೆಯವರು. ಶಿವಮೊಗ್ಗ ಜಿಲ್ಲೆಯಲ್ಲಿ ರೈತರು, ಕಾರ್ಮಿಕರು, ವ್ಯಾಪಾರ ವರ್ಗದವರನ್ನು ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ನಾನು ಈ ಹಿಂದೆ ಶಿವಮೊಗ್ಗಕ್ಕೆ ಬಂದಾಗ ಜಾಗತಿಕ ಬಂಡವಾಳ ಹೂಡಿಕೆಯಲ್ಲಿ ಶಿವಮೊಗ್ಗಕ್ಕೆ ಎಷ್ಟು ಕೋಟಿ ಬಂಡವಾಳ ಹೂಡಿಕೆಯಾಗಿದೆ ಎಂದು ಕೇಳಿದ್ದೆ. ಮೈಸೂರು ಮಹಾರಾಜರು ಕೊಟ್ಟ ವಿಐಎಸ್ಎಲ್ ಕಾರ್ಖಾನೆಯನ್ನು ಕೇಂದ್ರ ಸರ್ಕಾರ ಮುಚ್ಚಲು ಹೋದಾಗ, ಸಿದ್ದರಾಮಯ್ಯ ಅವರ ಸರ್ಕಾರವಿತ್ತು. ಆಗ ಸಂಗಮೇಶ್ ಅವರು ಮಾಜಿ ಶಾಸಕರಾಗಿದ್ದರೂ ಈ ಕಾರ್ಖಾನೆಗೆ ಗಣಿ ಜಾಗ ಮಂಜೂರು ಮಾಡಿಸಿದ್ದರು. ಆದರೂ ಕೇಂದ್ರ ಸರ್ಕಾರ ಈ ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಿ ಮತ್ತೆ ಆರಂಭಕ್ಕೆ ಆದ್ಯತೆ ನೀಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪನವರು 1 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವ ಭರವಸೆ ನೀಡಿದರು. ನಂತರ ಕೇಂದ್ರ ಸಚಿವರು ಬಂದು 6 ಸಾವಿರ ಕೋಟಿ ಬಂಡವಾಳ ಹೂಡಿಕೆ ನೀಡುವುದಾಗಿ ಹೇಳಿದ್ದರು. ಇದ್ಯಾವುದನ್ನು ಮಾಡಲಿಲ್ಲ. ಶಿವಮೊಗ್ಗ ಸಂಸದರೂ ಸೇರಿ ರಾಜ್ಯದಿಂದ 25 ಬಿಜೆಪಿ ಸಂಸದರಿದ್ದಾರೆ. ಆದರೂ ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿರುವ ಈ ಕಾರ್ಖಾನೆ ಉಳಿಸಲು ಪ್ರಯತ್ನಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಸ್ಥಾಪಿಸಿದ ಸಾರ್ವಜನಿಕ ಉದ್ದಿಮೆಗಳನ್ನು ಬಿಜೆಪಿ ಸರ್ಕಾರ ಖಾಸಗಿಯವರಿಗೆ ಮಾರುತ್ತಿದೆ. ಈಗ ಈ ಕಾರ್ಖಾನೆ ಮಾರಾಟ ಮಾಡಲು ಮುಂದಾಗಿದ್ದು, ಖರೀದಿ ಮಾಡಲು ಯಾರೂ ಬಂದಿಲ್ಲ ಎಂದು ಈಗ ಮುಚ್ಚಲು ಮುಂದಾಗಿದ್ದಾರೆ ಎಂದರು.

ಜನರಿಗೆ ಉದ್ಯೋಗ ನೀಡಿ, ಸುಸ್ಥಿರ ವ್ಯಾಪಾರ ವಹಿವಾಟು ನಡೆಸಲು ನೆಹರೂ ಅವರು ಅನೇಕ ಸಾರ್ವಜನಿಕ ಕಾರ್ಖಾನೆ , ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಉಕ್ಕಿನ ಕಾರ್ಖಾನೆ ಹಾಗೂ ಕಾಗದ ಕಾರ್ಖಾನೆ ಎರಡು ಸರ್ಕಾರದ ಸ್ವಾಮ್ಯದಲ್ಲೇ ಮುಂದುವರಿಯಬೇಕು, ಅವುಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಖಾಸಗಿಯವರಿಂದ ನಡೆಸಲಾಗುವ ಕಾರ್ಖಾನೆಯನ್ನು ಸರ್ಕಾರ ಯಾಕೆ ನಡೆಸಲು ಸಾಧ್ಯವಾಗುತ್ತಿಲ್ಲ? ಅಂದರೆ ನಿಮಗೆ ಆಡಳಿತ ನಡೆಸಲು ಆಗುತ್ತಿಲ್ಲ ಎಂಬುದು ಸಾಬೀತಾಗುತ್ತಿದೆ ಎಂದ ಡಿಕೆಶಿ, ಈ ಜಿಲ್ಲೆಯಲ್ಲಿ ಕೋಮುಗಲಭೆ ಮಾಡಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಅಶಾಂತಿ ಮೂಡಿಸಿ, ಸಂಜೆ ಆರು ಗಂಟೆಗೆ ಎಲ್ಲಾ ಅಂಗಡಿ ಮುಂಗಟ್ಟು ಮುಚ್ಚಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಬಂಡವಾಳ ಹೂಡಿಕೆ ಮಾಡಲು ಯಾರು ಮುಂದೆ ಬರುತ್ತಿಲ್ಲ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಎಷ್ಟು ಬಂಡವಾಳ ಹೂಡಿಕೆಯಾಗಿದೆ, ಎಷ್ಟು ಯೋಜನೆ ಜಾರಿಯಾಗಿವೆ ಎಂದು ಯಡಿಯೂರಪ್ಪ, ಸಂಸದ ರಾಘವೇಂದ್ರ ಹಾಗೂ ಈಶ್ವರಪ್ಪ ಅವರು ಉತ್ತರಿಸಬೇಕು. ಇಲ್ಲಿನ ಗೃಹ ಸಚಿವರ ಹೇಳಿಕೆಗಳು, ಅವರ ಹಗರಣಗಳನ್ನು ಹೇಳುತ್ತಿದ್ದರೆ ಅದರ ಬಗ್ಗೆಯೇ ದೊಡ್ಡ ಚರ್ಚೆ ಮಾಡಬಹುದು. ಇನ್ನು ಈ ಭಾಗದ ಪ್ರಮುಖ ಬೆಳೆ ಅಡಕೆಗೆ ಭವಿಷ್ಯವಿಲ್ಲ, ಅದನ್ನು ಬೆಳೆಯುವುದು ಬಿಡಿ ಎನ್ನುತ್ತಿದ್ದಾರೆ. ಅವರು ರಾಜಕಾರಣ ಮಾಡುವುದನ್ನು ಬಿಡಲಿ, ಅಧಿಕಾರ ಯಾಕೆ ಬೇಕು? ಕೇಂದ್ರ ಸರ್ಕಾರ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದರೆ ಸಾಕು. ಮಲೆನಾಡು ಮಾತ್ರವಲ್ಲ ರಾಜ್ಯದ ಬೇರೆ ಕಡೆಗಳಲ್ಲೂ ಬೆಳೆಯುತ್ತಿದ್ದಾರೆ. ಈ ಸರ್ಕಾರ ರೈತರಿಗೆ ಬೆಂಬಲ ಬೆಲೆ ನೀಡಲಿಲ್ಲ, ಕೊಟ್ಟ ಮಾತನ್ನೂ ಉಳಿಸಿಕೊಳ್ಳಲಿಲ್ಲ ಎಂದರು.

ಈ ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ, ಬಂಡವಾಳ ಹೂಡಿಕೆ ಮಾಡಿಸುವುದಾಗಿ ಮಾತು ಕೊಟ್ಟಮೇಲೆ ಸಂಸತ್ ಎದುರಿರುವ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಿಯಾದರೂ ಕಾರ್ಖಾನೆ ಪುನಶ್ಚೇತನಕ್ಕೆ ಬಂಡವಾಳ ಹೂಡಿಕೆಯಾಗುವಂತೆ ಮಾಡಬೇಕು. ಅಧಿಕಾರ ಮಾತ್ರ ಬೇಕು, ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವುದಿಲ್ಲ ಎಂದರೆ ಹೇಗೆ? ಜನರ ನೋವು ಕೇಳಲು ನಾವು ಪ್ರಜಾಧ್ವನಿ ಯಾತ್ರೆ ಮೂಲಕ ಬಂದಿದ್ದೇವೆ. ವಿಐಎಸ್ ಎಲ್, ಎಂಪಿಎಂ ಕಾರ್ಮಿಕರ ಜತೆ ಮಾತನಾಡಿದ್ದೇನೆ ಎಂದರು.

ಜನ ಈ ಡಬಲ್ ಇಂಜಿನ ಸರ್ಕಾರಕ್ಕೆ ಅಧಿಕಾರ ಕೊಟ್ಟಾಗಿದೆ. ಯಡಿಯೂರಪ್ಪ ವಿಫಲರಾದರೂ ಎಂದು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಅಮಿತ್ ಶಾ ಅವರು ರಾಜ್ಯಕ್ಕೆ ಬಂದು ನಾವು ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ಮಾಡುವುದಾಗಿ ಹೇಳಿದ್ದರು. ಈಗ ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದಿದ್ದಾರೆ. ಆ ಮೂಲಕ ಬೊಮ್ಮಾಯಿ ಅವರ ಆಡಳಿತವೂ ವಿಫಲವಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ನಾಯಕತ್ವ ಇಲ್ಲದ ಬಿಜೆಪಿ ಈಗ ಮೋದಿ ಅವರ ಮುಂದಿಟ್ಟು ಚುನಾವಣೆ ಮಾಡುತ್ತಿದೆ ಎಂದವರು ಹೇಳಿದರು.

ಕಾಂಗ್ರೆಸ್ ನಲ್ಲಿ ರಾಷ್ಟ್ರೀಯ ನಾಯಕರಿಲ್ಲ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಅವರು ಗಾಂಧಿ ಕುಟುಂಬವನ್ನು ಗುರಿಯಾಗಿಸಿ ಏನೇಲ್ಲಾ ಆರೋಪ ಮಾಡುತ್ತಿದ್ದಾರೆ ಎಂದು ನೀವು ನೋಡುತ್ತಿದ್ದೀರಿ. ಮಲ್ಲಿಕಾರ್ಜುನ ಖರ್ಗೆ ಅವರು ಈಗ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರು ನಿನ್ನೆ ಮೊನ್ನೆ ಬಂದವರಲ್ಲ’ ಎಂದು ತಿಳಿಸಿದರು.

ಪಕ್ಷದ ಟಿಕೆಟ್ ವಿಚಾರವಾಗಿ ಕೇಳಿದಾಗ, ‘ಈಗಾಗಲೇ ಎರಡು ಸಭೆ ಮಾಡಿದ್ದೇವೆ. ಇನ್ನು ಸ್ಕ್ರೀನಿಂಗ್ ಕಮಿಟಿ ಸಭೆ ನಡೆಯಬೇಕು. ನಮ್ಮ ಪಕ್ಷದ ಪ್ರಕ್ರಿಯೆ ಮೂಲಕ ಟಿಕೆಟ್ ತೀರ್ಮಾನ ಮಾಡಲಾಗುವುದು’ ಎಂದು ತಿಳಿಸಿದರು.

ಪಕ್ಷದ ಮುಂದಿನ ಘೋಷಣೆಗಳ ಬಗ್ಗೆ ಕೇಳಿದಾಗ, ‘ನಾವು ಈಗಾಗಲೇ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದ್ದೇವೆ. ಆ ಮೂಲಕ ವರ್ಷಕ್ಕೆ 42 ಸಾವಿರದಂತೆ ಐದು ವರ್ಷಕ್ಕೆ 2 ಲಕ್ಷ ರೂಪಾಯಿಯಷ್ಟು ಪ್ರತಿ ಕುಟುಂಬದ ವೆಚ್ಚವನ್ನು ಉಳಿತಾಯವಾಗುವಂತೆ ಮಾಡುತ್ತಿದ್ದೇವೆ. ಇಡೀ ದೇಶದಲ್ಲಿ ಯಾವ ಸರ್ಕಾರವೂ ಇಂತಹ ಕೊಡುಗೆ ನೀಡಿಲ್ಲ. ಇದು ಹೇಗೆ ಸಾಧ್ಯವಾಗಲಿದೆ ಎಂದು ಇಂಧನ ಸಚಿವರು ಕೇಳಿದ್ದಾರೆ. ಆದರೆ ಅವರು ಮಾತ್ರ ಹೇಗೆ ರೈತರಿಗೆ ನೀಡುವ ವಿದ್ಯುತ್ ಅನ್ನು 7ರಿಂದ 10 ಗಂಟೆಗೆ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ? ಯಡಿಯೂರಪ್ಪನವರ ಪ್ರಣಾಳಿಕೆಯಲ್ಲಿ ಈ ವಿಚಾರ ತಿಳಿಸಿದ್ದಾರೆ. 3 ಗಂಟೆ ಹೆಚ್ಚುವರಿ ವಿದ್ಯುತ್ ನೀಡಲು 5 ಸಾವಿರ ಕೋಟಿ ಬೇಕಾಗುತ್ತದೆ. ವಿದ್ಯುತ್ ಇಲ್ಲದಿದ್ದರೆ ಅವರು ಈ ಭರವಸೆ ನೀಡುವುದಾಗಿ ಮಾತು ಕೊಟ್ಟಿದ್ದೇಕೆ? ನಾನು ಇಂಧನ ಸಚಿವನಾಗಿ ಅಧಿಕಾರ ಸ್ವೀಕಾರ ಮಾಡಿದಾಗ ರಾಜ್ಯದಲ್ಲಿ 10ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಆದರೆ ಅದನ್ನು 20 ಸಾವಿರ ಮೆ.ವ್ಯಾ ಗೆ ಹೆಚ್ಚಳ ಮಾಡಿದೆ. ಶರಾವತಿ ವಿದ್ಯುತ್ ಘಟಕ ಸುಟ್ಟು ಹೋದಾಗ ಕೇವಲ 60 ದಿನಗಳಲ್ಲಿ ಮತ್ತೆ ಘಟಕ ಪುನರಾರಂಭವಾಗುವಂತೆ ಮಾಡಿದ್ದೆ. ನಮಗೆ ವಿದ್ಯುತ್ ಹೇಗೆ ಉತ್ಪಾದನೆ ಮಾಡಬಹುದು ಎಂದು ಗೊತ್ತಿದೆ. ಬಿಜೆಪಿಯವರ 40% ಕಮಿಷನ್ ನಿಲ್ಲಿಸಿದರೆ ನಮ್ಮ ಯೋಜನೆಗಳನ್ನು ಜಾರಿಗೊಳಿಸಬಹುದು. ಇದು ನಮ್ಮ ಸರ್ಕಾರದ ಬದ್ಧತೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 22 ಸಾವಿರ ಕೋಟಿಯಷ್ಟು ಟೆಂಡರ್ ಅನ್ನು ಕೇವಲ 7 ದಿನಗಳಲ್ಲಿ ಅವೈಜ್ಞಾನಿಕವಾಗಿ ಕರೆದು ಅಕ್ರಮ ನಡೆಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಅವರೇ ಹೇಳಿದ್ದಾರೆ. ಬಿಜೆಪಿ ಎಂಎಲ್ ಸಿ ವಿಶ್ವನಾಥ್, ಶಾಸಕ ಯತ್ನಾಳ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಕೂಡ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಪಿಎಸ್ಐ ಅಕ್ರಮ ನಡೆದಿಲ್ಲ ಎಂದು ಅರಗ ಜ್ಞಾನೇಂದ್ರ ಅವರು ಹೇಳಿದ್ದರು. ಆದರೆ ಐಪಿಎಸ್ ಅಧಿಕಾರಿ, ಅಭ್ಯರ್ಥಿಗಳು, ಅಕ್ರಮ ಮಾಡಿದ ಅಧಿಕಾರಿಗಳು ಜೈಲು ಪಾಲಾಗಿದ್ದಾರೆ. ಇವರ ಅಕ್ರಮಗಳಿಂದ ದೇಶದಲ್ಲಿ ಕರ್ನಾಟಕಕ್ಕೆ ಕಳಂಕ ಬಂದಿದೆ. ರಾಜ್ಯಕ್ಕೆ ದಕ್ಷ ಆಡಳಿತ ನೀಡಬೇಕು ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು’ ಎಂದು ತಿಳಿಸಿದರು.

ಅಕ್ರಮ ಆಸ್ತಿ ವಿಚಾರವಾಗಿ ಚಾರ್ಜ್ ಶೀಟ್ ಸಲ್ಲಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ವಿಚಾರವಾಗಿ ದಿನನಿತ್ಯ ನನಗೆ ನೊಟೀಸ್ ನೀಡುತ್ತಿದ್ದಾರೆ. ನಿನ್ನೆ ನನ್ನ ಮಗಳ ಕಾಲೇಜಿಗೆ ಹೋಗಿ ನೋಟೀಸ್ ನೀಡಿದ್ದು, ವಿದ್ಯಾರ್ಥಿಗಳು ಕಟ್ಟಿರುವ ಶುಲ್ಕದ ವಿವರ ಕೇಳಿದ್ದಾರೆ. ಈ ಬಗ್ಗೆ ನಾನೇನು ಹೇಳಲಿ? ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಅಂದರೆ ಅವರು ನನಗೆ ಹೇಗೆಲ್ಲಾ ಕಿರುಕುಳ ನೀಡುತ್ತಿದ್ದಾರೆ ನೀವೇ ಆಲೋಚಿಸಿ. ಇಡಿ ಅಧಿಕಾರಿಗಳ ಮುಂದೆ ಎಲ್ಲ ಉತ್ತರ ನೀಡಿದ್ದೇನೆ. ನ್ಯಾಷನಲ್ ಹೆರಾಲ್ಡ್ ವಿಚಾರವಾಗಿ ಉತ್ತರ ನೀಡಿದ್ದೇನೆ. ಆದರೂ 22 ರಂದು ಇಡಿ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದ್ದಾರೆ. ನಾನು ಪ್ರಜಾಧ್ವನಿ ಯಾತ್ರೆ ಮಾಡಲೋ ವಿಚಾರಣೆಗೆ ಹಾಜರಾಗಲೋ? ಆಡಳಿತ ಪಕ್ಷದವರು ಎಷ್ಟು ಸಾವಿರ ಕೋಟಿ ಲೂಟಿ ಹೊಡೆದರೂ ಕೇಳುವುದಿಲ್ಲ. ಈ ವಿಚಾರಣೆ ಏನಿದ್ದರೂ ವಿರೋಧ ಪಕ್ಷಗಳ ನಾಯಕರಿಗೆ ಮಾತ್ರ ಸೀಮಿತ’ ಎಂದು ತಿಳಿಸಿದರು.

Related posts