ಬೆಂಗಳೂರು: ಮಲ್ಲಿಕಾಂರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ದೇಶವೇ ಗುರುತಿಸುವ ಮಟ್ಟಿಗೆ ಬೆಳೆದಿದ್ದಾರೆ. ಅವರ ಅಧ್ಯಕ್ಷತೆ ಹಾಗೂ ಡಿ.ಕೆ. ಶಿವಕುಮಾರ್ ಅವರ ರಾಜ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಿದ್ದೇನೆ. ಎಸ್.ಎಂ. ಕೃಷ್ಣ ಅವರ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಕೊಡಿಸಿದ್ದು ಶಿವಕುಮಾರ್ ಅವರು. ಅವರ ಸಹಾಯವನ್ನು ನಾನು ಏಳೇಳು ಜನ್ಮಕ್ಕೂ ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕವು ಖರ್ಗೆ ಅವರ ಭದ್ರಕೋಟೆ, ಅದನ್ನು ಛಿದ್ರ ಮಾಡಬೇಕು ಎಂದು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆ. ಆದರೆ ಖರ್ಗೆ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದರು.
ನಾನು ಕಾಂಗ್ರೆಸ್ ಪಕ್ಷ ಸೇರುತ್ತಿದ್ದು, ಹೈದರಾಬಾದ್ ಕರ್ನಾಟಕದಲ್ಲಿ ಖರ್ಗೆ ಅವರ ನೇತೃತ್ವದಲ್ಲಿ ಕಾಂಗ್ರೆಸ್ 25 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಚಂಡ ಗೆಲವು ಸಾಧಿಸಲಿದೆ. 2023ರಲ್ಲಿ ಬಾಬುರಾವ್ ಚಿಂಚನಸೂರು ಸಾಮರ್ಥ್ಯ ಏನು ಎಂದು ತೋರಿಸುತ್ತೇನೆ ಎಂದರು.
ಖರ್ಗೆ ಅವರ ಮೇಲೆ ಕೋಪಗೊಂಡು ನೀವು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದಿರಿ ಎಂಬ ಸುದ್ದಿಗಾರರು ಗಮನಸೆಳೆದಾಗ, ‘ತಂದೆ ಮಗನ ಜಗಳ ಇದ್ದೇ ಇರುತ್ತದೆ. ಅದು ಈಗ ಸರಿ ಹೋಗಿದೆ‘ ಎಂದು ಉತ್ತರಿಸಿದರು.
ಖರ್ಗೆ ಅವರನ್ನು ಸೋಲಿಸುತ್ತೇನೆ ಎಂದು ಬಿಜೆಪಿ ಕಚೇರಿಯಲ್ಲಿ ತೊಡೆ ತಟ್ಟಿದ್ದವರು ಈಗ ಅವರ ಪಕ್ಷ ಸೇರುತ್ತಿದ್ದೀರಿ, ಇದು ಅವಕಾಶವಾದಿ ರಾಜಕಾರಣವಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾನು ಅವಕಾಶವಾದಿ ರಾಜಕಾರಣ ಮಾಡುವ ಅಗತ್ಯವಿಲ್ಲ. ನನಗೆ ತಂದೆ, ತಾಯಿ, ಮಕ್ಕಳಿಲ್ಲ. ನಾನು ಮತ್ತು ನನ್ನ ಪತ್ನಿ ಮಾತ್ರ ಇದ್ದೇವೆ. ಸುಮಾರು 30 ವರ್ಷಗಳಿಂಗ ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ. ಪಕ್ಷಕ್ಕೆ ದುಡಿದಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಬಲ ನೀಡುತ್ತೇನೆ. ಚಿತ್ತಾಪುರದಲ್ಲಿ ಬಿಜೆಪಿ ಹೇಳಹೆಸರಿಲ್ಲದಂತೆ ಮಾಡುತ್ತೇವೆ’ ಎಂದರು.
ನಿಮ್ಮ ಜತೆ ಬಿಜೆಪಿ ಸೇರಿದ್ದವರನ್ನು ಕರೆ ತರುತ್ತೀರಾ ಎಂಬ ಪ್ರಶ್ನೆಗೆ, ‘2023 ರ ಚುನಾವಣೆಯಲ್ಲಿ ಯಾರು ಎಲ್ಲಿರುತ್ತಾರೆ ಎಂದು ಎಲ್ಲರಿಗೂ ತಿಳಿಯಲಿದೆ’ ಎಂದರು.