ಆನ್‌ಲೈನ್‌ ಗೇಮಿಂಗ್‌ ಚಟ; ಕಳೆದುಕೊಂಡ ಹಣ ಸರಿದೂಗಿಸಲು ಎಳನೀರು ಕದಿಯುತ್ತಿದ್ದ ಭೂಪ ಅರೆಸ್ಟ್

ಟ್ಯಾಕ್ಸಿ ಚಾಲಕನೊಬ್ಬ ತನ್ನ ಆನ್‌ಲೈನ್‌ ಗೇಮಿಂಗ್‌ ಚಟಕ್ಕಾಗಿ ರಸ್ತೆ ಬದಿ ಎಳ ನೀರು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರಿನ ಗಿರಿನಗರ ಪೊಲೀಸರು ಈತನನ್ನು ಬಂಧಿಸಿದ್ದು, ಈತ ತಮಿಳುನಾಡು ಮೂಲದ ಮೋಹನ್‌ ಎಂಬ ಹೆಸರಿನಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ.

ಈತ ಸಿಕ್ಕಿಬಿದ್ದಿದ್ದು ಹೀಗೆ..

ಬೆಂಗಳೂರಿನ ಗಿರಿನಗರದ ಮಂಕುತಿಮ್ಮ ಪಾರ್ಕ್‌ ಬಳಿ ಫ‌ುಟ್‌ಪಾತ್‌ ಮೇಲೆ ಎಳನೀರು ವ್ಯಾಪಾರ ಮಾಡುತ್ತಿದ್ದ ರಾಜಣ್ಣ ಎಂಬುವರು ನ.6ರಂದು ಸುಮಾರು 1,150 ಎಳನೀರು ತರಿಸಿದ್ದರು. ರಾತ್ರಿ ಟಾರ್ಪಲ್‌‌ನಿಂದ ಮುಚ್ಚಿ ಮನೆಗೆ ತೆರಳಿದ್ದರು. ಮರು ದಿನ ನೋಡಿದಾಗ ಸಾವಿರಾರು ಎಳನೀರುಗಳು ಕಳುವಾಗಿದ್ದವು. ಈ ಬಗ್ಗೆ ರಾಜಣ್ಣ ಅವರು ಗಿರಿನಗರ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಕಾರ್ಯಾಚರಣೆಗಿಳಿದ ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಹಲವು ತಿಂಗಳಿನಿಂದ ಈತ ಎಳನೀರು ಕಳ್ಳತನ ಮಾಡುತ್ತಿದ್ದ ಸಂಗತಿಯನ್ನು ಬೆಳಕಿಗೆ ತಂದಿರುವ ಪೊಲೀಸರು, ಈತ ತನ್ನ ಆನ್‌ಲೈನ್ ಗೇಮ್‌ನಿಂದಾಗಿ ಭಾರೀ ಮೊತ್ತದ ಹಣ ಕಳೆದುಕೊಂಡಿದ್ದು, ಹಣ ಸರಿದೂಗಿಸಲು ಎಳನೀರು ಕಳ್ಳತನದ ಹಾದಿ ಹಿಡಿದಿದ್ದ ಎಂಬ ವಿಚಾರವನ್ನೂ ಬೆಳಕಿಗೆ ತಂದಿದ್ದಾರೆ.

ಈತನಿಂದ ಸುಮಾರು 8.75 ಲಕ್ಷ ರೂಪಾಯಿ ಮೌಲ್ಯದ ನೂರಾರು ಎಳನೀರು, ಒಂದು ಕಾರು, ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.

Related posts