ಮಂಗಳೂರು: ಕೋಟ ಶ್ರೀನಿವಾಸ ಪೂಜಾರಿ ಪ್ರತಿನಿಧಿಸುತ್ತಿದ್ದ ಕರಾವಳಿಯ ವಿಧಾನ ಪರಿಷತ್ ಸ್ಥಾನಕ್ಜೆ ಬಿಜೆಪಿ ಅಭ್ಯರ್ಥಿಯಗಿ ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ಪಕ್ಷ ಆಯ್ಕೆ ಮಾಡಿದೆ.
ಕೋಟಾ ಶ್ರೀನಿವಾಸ ಪೂಜಾರಿಯವರು ಸಂಸದರಾಗಿ ಆಯ್ಕೆಯಾದ ಕಾರಣ ತೆರವಾಗಿದ್ದ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪಚುನಾವಣೆಗೆ ಭಾರತೀಯ ಜನತಾ ಪಕ್ಷವು ಮಂಗಳವಾರ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದೆ.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸಹಿತ ಅನೇಕ ಮುಖಂಡರು ಲಾಭಿ ನಡೆಸುತ್ತಿದ್ದರು. ಇದೀಗ ಬಿಜೆಪಿ ನಾಯಕ ಕಿಶೋರ್ ಕುಮಾರ್ ಬೊಟ್ಯಾಡಿ ಅವರಿಗೆ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಕಿಶೋರ್ ಕುಮಾರ್ ಬೊಟ್ಯಾಡಿ ಅವರನ್ನು ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ತಿನ ಉಪಚುನಾವಣೆಯ ಅಭ್ಯರ್ಥಿಯಾಗಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಘೋಷಿಸುತ್ತಿದ್ದಂತೆಯೇ ಪಕ್ಷದ ಪಾಳಯದಲ್ಲಿ ಚಟುವಟಿಕೆಗಳು ಬಿರುಸುಗೊಂಡಿದೆ.