ಕಾಂಗ್ರೆಸ್‌ಗೆ ಇದೀಗ ಯಡಿಯೂರಪ್ಪ ಟಾರ್ಗೆಟ್..!?

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೀಗ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಅವರೇ ಟಾರ್ಗೆಟ್. ಕೆಲವು ದಿನಗಳಿಂದ ಕಾಂಗ್ರೆಸ್ ನಾಯಕರು ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣವನ್ನು ಮುಂದಿಟ್ಟು ನೀಡುತ್ತಿರುವ ಹೇಳಿಕೆಗಳು ಕುತೂಹಲಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ಬಿಎಸ್‌ವೈ ವಿರುದ್ದ ಪ್ರಕರಣ ದಾಖಲಾದ ಸಂದರ್ಭದಲ್ಲಿ ದೂರುದಾರರ ಮಾನಸಿಕ ಸ್ಥಿರತೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ. ನಂತರ ತಿಂಗಳುಗಟ್ಟಲೆ ಮೌನವಿದ್ದ ಕಾಂಗ್ರೆಸ್ ನಾಯಕರು ಇದೀಗ ತಡವಾಗಿ ಬಿಎಸ್‌ವೈ ಪ್ರಕರಣವನ್ನು ಕೆದಕುತ್ತಿರುವ ವೈಖರಿ ಗಮನಿಸಿದರೆ ಮುಂದಿನ ಬೆಳವಣಿಗೆ ಕುತೂಹಲ ಮೂಡುವಂತಿದೆ.

ಈ ನಡುವೆ, ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಪೋಕ್ಸೋ ಕಾಯ್ದೆಯಡಿ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ನೃತ್ಯ ನಿರ್ದೇಶಕರಾದ ಜಾನಿ ಮಾಸ್ಟರ್ ಅವರಿಗೆ ನೀಡಲಾಗಿದ್ದ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಜಾನಿ ಮಾಸ್ಟರ್ ವಿಚಾರದಲ್ಲಿ ಕಠಿಣ ನಿಲುವು ತಾಳಿರುವ ಬಿಜೆಪಿ ನಾಯಕರು ವಿಚಾರದಲ್ಲಿ ಬಿಜೆಪಿ ಸ್ಪಷ್ಟ ನಿಲುವು ತೋರುತ್ತಿಲ್ಲ ಯಾಕೆ? ಎಂದು ಪ್ರಶ್ನಿಸಿದ್ದಾರೆ.‌

ಕೇಂದ್ರ ಸರ್ಕಾರದ ಮಟ್ಟದಲ್ಲಿ ತೆಗೆದುಕೊಂಡಿರುವ ಈ ನಿರ್ಧಾರ ಒಂದು ಕಡೆಯಾದರೆ, ಬಿಜೆಪಿ ಪಕ್ಷ ಮಟ್ಟದ ವಿಚಾರದಲ್ಲಿ ಯಾಕೆ ದ್ವಂದ್ವ ನಿಲುವು ತಾಳಲಾಗಿದೆ? ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆಯಾಗಿ ಜುಲೈ ತಿಂಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಈಗ ವಿಚಾರಣೆ ನಡೆಯಬೇಕಾಗಿದೆ ಎಂದರು.

ಸಿಐಡಿಯವರು ಯಡಿಯಬರಪ್ಪ ಹಾಗೂ ಮೂವರು ಸಹಚರರ ವಿರುದ್ಧ 700 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದು, ಇವರು ಸಾಕ್ಷಿನಾಶ, ಪ್ರಕರಣ ಮುಚ್ಚಿಹಾಕುವ ವಿಚಾರ, ಸಂತ್ರಸ್ತ ಬಾಲಕಿ ಹೆಳಿಕೆಗಳನ್ನು ಸೇರಿಸಿ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದ ದಿನೇಶ್ ಗುಂಡೂರಾವ್, ಸಹಾಯಕ್ಕೆಂದು ಬಂದ ಬಾಲಕಿ ಮೇಲೆ ಇಂತಹ ಕೆಟ್ಟ ಅನುಭವ ಆಗಿರುವ ಪ್ರಕರಣವನ್ನು ಬಹಳ ಹಗುರವಾಗಿ ಪರಿಗಣಿಸಲಾಗಿರುವುದು ದುರ್ದೈವ. ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ. ಸಿಐಡಿ ತನಿಖೆಯಾಗಿ ಆರೋಪಪಟ್ಟಿಯಲ್ಲಿ ಅನೇಕ ಮಾಹಿತಿ ಇದ್ದರೂ ಇದನ್ನು ಪ್ರಶ್ನೆ ಮಾಡಬಾರದೇ? ಈ ವಿಚಾರದಲ್ಲಿ ಬಿಜೆಪಿ ಸ್ಪಷ್ಟ ನಿಲುವು ತೋರುತ್ತಿಲ್ಲ ಯಾಕೆ? ಯಡಿಯೂರಪ್ಪ ಅವರನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿ ಯಾಕೆ ಉಳಿಸಿಕೊಂಡಿದ್ದಾರೆ? ಕನಿಷ್ಠಪಕ್ಷ ಬಿಜೆಪಿಯು ಈ ಪ್ರಕರಣದ ವಿಚಾರಣೆ ಮುಗಿಯುವವರೆಗೂ ಪಕ್ಷದ ಎಲ್ಲಾ ಹುದ್ದೆಗಳಿಂದ ಅವರನ್ನು ತೆಗೆದುಹಾಕುವ ನಿರ್ಧಾರ ಯಾಕೆ ಮಾಡುತ್ತಿಲ್ಲ? ಮಹಿಳೆಯರ ಪರವಾಗಿ ಅವರ ನಿಲುವೇನು? ಎಂದು ಪ್ರಶ್ನಿಸಿದರು.

ಯಾವ ಒತ್ತಡಕ್ಕೆ ಅವರು ಮಣಿದಿದ್ದಾರಾ? ಬಿಜೆಪಿ ನಾಯಕರ ಹೇಳಿಕೆ ಪ್ರಕಾರ ಬಿಜೆಪಿ ರಾಜ್ಯಾಧ್ಯಕ್ಷರ ಬ್ಲಾಕ್ ಮೇಲ್ ನಿಂದಾಗಿ ಯಡಿಯೂರಪ್ಪ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದ ಅವರು, ಒಂದುಕಡೆ ಆ ಆರೋಪ ಹೊತ್ತಿರುವ ಕಾರಣ ನೃತ್ಯ ನಿರ್ದೇಶಕನಿಗೆ ಕೊಟ್ಟಿರುವ ಪ್ರಶಸ್ತಿ ಹಿಂಪಡೆಯಲಾಗಿದೆ, ಮತ್ತೊಂಡೆದೆ ಇದೇ ಆರೋಪ ಹೊತ್ತಿರುವ ಯಡಿಯೂರಪ್ಪ ಅವರ ಮೇಲೆ ಆರೋಪಪಟ್ಟಿ ದಾಖಲಾಗಿದ್ದರೂ ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ? ಈ ವಿಚಾರದಲ್ಲಿ ಬಿಜೆಪಿ ಮನಸ್ಥಿತಿ ಏನು? ಯಡಿಯೂರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ಹೈಕಮಾಂಡ್ ಹಿಂದೇಟು ಹಾಕುತ್ತಿರುವುದೇಕೆ? ಎಂದು ಪ್ರಶ್ನಿಸಿದರು.

ಪೋಕ್ಸೋ ಪ್ರಕರಣ ಹಾಗೂ ಈ ಕಾಯ್ದೆ ಮಾನದಂಡಗಳು ಬಹಳ ಗಂಭೀರವಾಗಿವೆ. ಈ ಆರೋಪ ಸಾಬೀತಾದರೆ ಗಂಭೀರವಾದ ಶಿಕ್ಷೆ ಒಳಗುವ ಸಾಧ್ಯತೆ ಇದೆ. ಬಿಜೆಪಿಯ ಅನೇಕ ನಾಯಕರ ಮೇಲೆ ಇಂತಹ ಆರೋಪಗಳಿವೆ. ಶಾಸಕ ಮುನಿರತ್ನ ಅವರ ಪ್ರಕರಣದಲ್ಲಿ ಬಿಜೆಪಿ ಸ್ಪಷ್ಟ ನಿಲುವು ತಾಳಿಲ್ಲ. ಹೆಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಅವರ ವಿಚಾರದಲ್ಲೂ ಬಿಜೆಪಿ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ. ಮಹಿಳೆಯರ ಮೇಲಿನ ಎಲ್ಲಾ ದೌರ್ಜನ್ಯ ಪ್ರಕರಣಗಳನ್ನು ಬಿಜೆಪಿಯವರು ರಾಜಕೀಯವಾಗಿ ನೋಡುತ್ತಿದ್ದು, ರಾಜಕೀಯವಾಗಿ ನೋಡುವ ಅಗತ್ಯವಿಲ್ಲ ಎಂದ ದಿನೇಶ್ ಗುಂಡೂರಾವ್, ದೇಶದ ಕುಸ್ತಿಪಟುಗಳು ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ವಿರೋಧಿಸಿ ಬೀದಿಯಲ್ಲಿ ಹೋರಾಟ ಮಾಡಿದರು. ಈ ಪ್ರಕರಣದಲ್ಲೂ ಬಿಜೆಪಿ ನಾಯಕರು ಸಹಾನುಭೂತಿ ತೋರಲಿಲ್ಲ, ಆರೋಪಿ ಬ್ರಿಜ್ ಭೂಷಣ್ ಸಿಂಗ್ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ನಿಟ್ಟಿನಲ್ಲೇ ಬಿಜೆಪಿಯನ್ನು ಬಲತ್ಕಾರಿ ಜನತಾ ಪಕ್ಷ ಎಂದು ಕರೆಯುತ್ತಾರೆ. ಈ ರೀತಿ ಹೇಳಲು ಕಷ್ಟವಾಗುತ್ತದೆ. ಆದರೆ ಇಂತಹ ಪ್ರಕರಣಗಳು ಮಣಿಪುರದ ಘಟನೆಗಳಲ್ಲಿ ದಿಟ್ಟ ನಿಲುವು ಯಾಕೆ ತೋರುತ್ತಿಲ್ಲ? ಎಂದು ಪ್ರಶ್ನೆ ಮಾಡಿದರು.

ಮಹಿಳೆಯರ ವಿಚಾರದಲ್ಲಿ ಬಿಜೆಪಿ ಸಮರ್ಥವಾಗಿದ್ದರೆ ಯಡಿಯೂರಪ್ಪ ಅವರನ್ನು ಅವರ ಸ್ಥಾನದಿಂದ ತೆಗೆದುಹಾಕಬೇಕು. ಜಾನಿ ಮಾಸ್ಟರ್ ಪ್ರಕರಣದಲ್ಲಿನ ನಿಲುವು, ಯಡಿಯೂರಪ್ಪನವರ ಪ್ರಕರಣದಲ್ಲಿ ಯಾಕಿಲ್ಲ? ಎಂದು ಪ್ರಶ್ನಿಸಿದ ವೈಖರಿ ಕುತೂಹಲ ಕೆರಳುವಂತಿದೆ.

Related posts