ಬೆಂಗಳೂರು: ದೇಶದಲ್ಲಿ ಕೊರೋನಾ ಮರಣಮೃದಂಗ ಭಾರಿಸುತ್ತಿದ್ದು ಪರಿಸ್ಥಿತಿ ನಿಭಾಯಿಸಲು ಸರ್ಕಾರ ಹರಸಾಹಸವನ್ನೇ ನಡೆಸುತ್ತಿದೆ. ಅನಿವಾರ್ಯ ಎಂಬಂತೆ ಲಾಕ್ ಡೌನ್ ಘೋಷಿಸಲಾಗಿದ್ದು ಈ ಸಂದರ್ಭದಲ್ಲಿ ಕೆಲಸವಿಲ್ಲದೇ ಕೋಟ್ಯಂತರ ಜನ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಸಂಧಿ ಕಾಲದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜನರ ನೆರವಿಗೆ ಧಾವಿಸಿದ್ದು, ಈ ಪರಿಹಾರ ಕ್ರಮಗಳಿಗಾಗಿ ದೇಣಿಗೆಯ ಮಹಾಪೂರವೇ ಹರಿದುಬರುತ್ತಿವೆ.
ಕನ್ನಡ ಚಿತ್ರರಂಗದ ಜನಪ್ರಿಯ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೋವಿಡ್-19 ನಿಯಂತ್ರಣ ಸಂಬಂಧ ಸರ್ಕಾರದ ಜೊತೆಗೆ ಕೈ ಜೋಡಿಸಿದ್ದಾರೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅವರು 50 ಲಕ್ಷ ರೂಪಾಯಿಗಳ ದೇಣಿಗೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಬಲಪಡಿಸುವ ಕೋರಿಕೆಗೆ ಸ್ಪಂಧಿಸಿರುವ ಪುನೀತ್ ರಾಜ್ ಕುಮಾರ್ ಅವರು, ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ತಮ್ಮ ದೇಣಿಗೆಯ ಚೆಕ್ ಹಸ್ತಾಂತರಿಸಿದರು.
ರೈತಾಪಿ ಕಲ್ಯಾಣ, ಮತದಾನ ಜಾಗೃತಿ ಸಹಿತ ಸಾಮಾಜಿಕ ಕಳಕಳಿಯ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ನಟ ಪುನೀತ್ ರಾಜ್ ಕುಮಾರ್, ರೈತರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಹಾಲು ಉತ್ಪಾದಕರ ಒಕ್ಕೂಟದ ರಾಯಭಾರಿಯಾಗಿ ಉಚಿತ ಸೇವೆ ನೀಡಿರುವುದನ್ನು ಇಲ್ಲಿ ನೆನಪಿಸಬಹುದು. ಇದೀಗ ಕೊರೋನಾ ನಿಯಂತ್ರಣ ಸಂಬಂಧ ಅವರು ಭಾರೀ ಮೊತ್ತದ ದೇಣಿಗೆ ನೀಡುವ ಮೂಲಕ ಅಭಿಮಾನಿಗಳಿಂದಲೂ ಶಹಬ್ಬಾಸ್’ಗಿರಿ ಗಿಟ್ಟಿಸಿಕೊಂಡಿದ್ದಾರೆ.