ಕೊರೋನಾ ತಡೆಗೆ ಕೆಪಿಸಿಸಿಯಿಂದಲೇ ವಾರ್ ರೂಂ: ಡಿ.ಕೆ.ಶಿ ಘೋಷಣೆ

ಬೆಂಗಳೂರು: ಮಹಾಮಾರಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ, ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕೊರೋನಾ ಸೋಂಕು ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಸರ್ಕಾರವೇ ಉಚಿತವಾಗಿ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್  ಆಗ್ರಹಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೊರೋನಾ ಪರಿಸ್ಥಿತಿ ನಿರ್ವಹಣೆ ಕುರಿತ ಕಾಂಗ್ರೆಸ್ ಕಾರ್ಯಪಡೆಯ  ಸಭೆಯಲ್ಲಿ ಈ ಮಾರಕ  ರೋಗದ ಹಾವಳಿ ಹಾಗೂ ಪ್ರಸ್ತುತ ಪರಿಸ್ಥಿತಿ ಬಗ್ಗೆ ನಾಯಕರು ಸುದೀರ್ಘ ಚರ್ಚೆ ನಡೆಸಿದರು. ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಕಾರ್ಯಪಡೆ ಮುಖ್ಯಸ್ಥ ರಮೇಶ್ ಕುಮಾರ್ ಮೊದಲಾದ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸುವ ಬಗ್ಗೆ ಕೆಲವೊಂದು ನಿರ್ಣಯಗಳನ್ನು ಕೈಗೊಳ್ಳಲಾಯಿತು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಪ್ರಮುಖ ನಿರ್ಣಯಗಳು ಹೀಗಿವೆ:
  • ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಕೊರೋನಾ ಪರೀಕ್ಷಾ ಕೇಂದ್ರಗಳನ್ನು ಆದಷ್ಟು ಬೇಗ ತೆರೆಯಬೇಕು. ಎಲ್ಲಾ ಕೊರೋನಾ ಸೋಂಕಿತರಿಗೆ ಸರ್ಕಾರವೇ ಉಚಿತವಾಗಿ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ನೀಡಬೇಕು.
  • ಕೊರೋನಾ ಚಿಕಿತ್ಸೆ ನೀಡಲಾಗುತ್ತಿರುವ ಆಸ್ಪತ್ರೆಗಳಲ್ಲಿ 1000 ವೆಂಟಿಲೇಟರ್ ಗಳ ಸೌಲಭ್ಯ ಕಲ್ಪಿಸುವುದಾಗಿ ಸರ್ಕಾರ ಘೋಷಿಸಿತ್ತು. ಈವರೆಗೂ ಅದನ್ನು ಕಲ್ಪಿಸಲಾಗಿಲ್ಲ. ಆದಷ್ಟು ವೆಂಟಿಲೇಟರ್ ವ್ಯವಸ್ಥೆ ಕಲ್ಪಿಸಬೇಕು.
  • ಕೊರೋನಾಗೆ ಚಿಕಿತ್ಸೆ ನೀಡುತ್ತಿರುವ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ವೈದ್ಯರಿಗೆ ವಿಮಾ ಸೌಲಭ್ಯ ನೀಡಬೇಕು. ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಗ್ಲೌಸ್ ಮುಂತಾದ ಸುರಕ್ಷಾ ಪರಿಕರಗಳನ್ನು ಉಚಿತವಾಗಿ ಒದಗಿಸಬೇಕು.
  • ಲಾಕ್ ಡೌನ್ ಪರಿಣಾಮವಾಗಿ ಜನರು ಆಹಾರ ಸಾಮಾಗ್ರಿಗಳ ಕೊರತೆಯಿಂದ ತತ್ತರಿಸಿ ಹೋಗಿದ್ದು, ಎಲ್ಲಡೆ ಹಾಹಾಕಾರ ಎದ್ದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕ್ಷಿಪ್ರಗತಿಯಲ್ಲಿ ಎಲ್ಲರಿಗೂ ಆಹಾರ ಸಾಮಾಗ್ರಿ ಸಿಗುವಂತೆ ನೋಡಿಕೊಳ್ಳಬೇಕು.
  • ಎಲ್ಲಾ ಸಾಲಗಳ ಮಾಸಿಕ ಕಂತುಗಳನ್ನು ಮುಂದೂಡಿರುವ ಬಗ್ಗೆ ಇರುವ ಗೊಂದಲಗಳ ನಿವಾರಣೆಗೆ ಮುಖ್ಯಮಂತ್ರಿಗಳು ಬ್ಯಾಂಕುಗಳ ಪ್ರತಿನಿಧಿಗಳ ಸಭೆ ಕರೆದು ಚರ್ಚಿಸಬೇಕು ಹಾಗೂ ನಿರ್ದಿಷ್ಟ ಸೂಚನೆಗಳನ್ನು ನೀಡಬೇಕು.
  • ಗಡಿ ಭಾಗಗಳಲ್ಲಿ ಸಿಲುಕಿರುವ ವಲಸಿಗರಿಗೆ ಉಚಿತ ಆಹಾರ ಮತ್ತು ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಬೇಕು. ನಂತರ ಅವರ ಊರುಗಳಿಗೆ ಅವರನ್ನು ತಲುಪಿಸಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಈ ಎಲ್ಲ ಕಾರ್ಯಗಳು ಸಮರೋಪಾದಿಯಲ್ಲಿ ಸಾಗಬೇಕು.

ಈ ನಿರ್ಣಯಗಳಷ್ಟೇ ಅಲ್ಲ, ಕೊರೋನಾ ನಿಯಂತ್ರಣ ಸಂಬಂಧ ಕೆಪಿಸಿಸಿ ವತಿಯಿಂದ ದೇಣಿಗೆ ಸಂಗ್ರಹಿಸಲು ಹಾಗೂ ಕೆಪಿಸಿಸಿ ಕಚೇರಿಯಲ್ಲಿ ವಾರ್ ರೂಮ್ ತೆರೆಯುವ ಬಗ್ಗೆಯೂ ನಾಯಕರು ನಿರ್ಧರಿಸಿದ್ದಾರೆ.

ಇದನ್ನೂ ಓದಿ.. ಕೊರೋನಾ ವಿಚಾರದಲ್ಲಿ ಬೆಂಗಳೂರು, ಮಂಗಳೂರು ಸೇಫ್ ಅಲ್ಲ..!! ಇನ್ನು ನಿಮ್ಮೂರು..?

Related posts