ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ 2026–27ರ ಕೇಂದ್ರ ಬಜೆಟ್ ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಕನಸನ್ನು ಸಾಕಾರಗೊಳಿಸುವ ಸ್ಪಷ್ಟ ನೀಲನಕ್ಷೆಯಾಗಿದೆ ಎಂದು ಕೇಂದ್ರ ಆಹಾರ, ಸಾರ್ವಜನಿಕ ವಿತರಣೆ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಬಜೆಟ್ ಏಳು ಪ್ರಮುಖ ವಲಯಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವ ಉದ್ದೇಶ ಹೊಂದಿರುವ ಬೆಳವಣಿಗೆ ಕೇಂದ್ರೀತ ದಾಖಲೆ ಎಂದು ಅವರು ಅಭಿಪ್ರಾಯಪಟ್ಟರು. ಬಯೋಫಾರ್ಮಾ ವಲಯಕ್ಕೆ ರೂ.10,000 ಕೋಟಿ ಹಂಚಿಕೆ ಮಾಡಿರುವುದು ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ನಾವೀನ್ಯತೆ ಹಾಗೂ ಉತ್ಪಾದನೆಗೆ ಮಹತ್ವದ ಉತ್ತೇಜನ ನೀಡಲಿದೆ ಎಂದರು.
ಭಾರತೀಯ ಸೆಮಿಕಂಡಕ್ಟರ್ ಮಿಷನ್ 2.0ರ ಉಡಾವಣೆ ಭಾರತವನ್ನು ಜಾಗತಿಕ ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ರೂಪಿಸುವ ದಿಟ್ಟ ಹೆಜ್ಜೆಯಾಗಿದೆ ಎಂದು ಜೋಶಿ ಹೇಳಿದರು. ದೇಶೀಯ ಉತ್ಪಾದನೆಗೆ ವೇಗ ನೀಡುವ ಉದ್ದೇಶದಿಂದ ಎಲೆಕ್ಟ್ರಾನಿಕ್ಸ್ ಘಟಕ ಉತ್ಪಾದನಾ ಯೋಜನೆಯಡಿಯಲ್ಲಿ ಹೂಡಿಕೆಯನ್ನು ಸುಮಾರು ರೂ.40,000 ಕೋಟಿಗೆ ಹೆಚ್ಚಿಸಲಾಗಿದೆ ಎಂದರು.
ಅಪರೂಪದ ಭೂಮಿಧಾತುಗಳ ಬಳಕೆ, ರಾಸಾಯನಿಕ ಉದ್ಯಾನವನಗಳ ಸ್ಥಾಪನೆ ಮತ್ತು ಜಾಗತಿಕ ಮಟ್ಟದ ಕಂಟೇನರ್ ಉತ್ಪಾದನೆಗೆ ರೂ.10,000 ಕೋಟಿ ಬೆಂಬಲ ಘೋಷಿಸಿರುವುದು ಭಾರತದ ಕೈಗಾರಿಕಾ ಅಡಿಪಾಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಅವರು ಹೇಳಿದರು.
ಕಾರ್ಮಿಕಾಧಾರಿತ ಜವಳಿ ಕೈಗಾರಿಕೆಗಳಿಗೆ ವಿಶೇಷ ಒತ್ತು ನೀಡಲಾಗಿದ್ದು, ಖಾದಿ, ಗ್ರಾಮ ಕೈಗಾರಿಕೆ ಹಾಗೂ ಕರಕುಶಲ ವಸ್ತುಗಳಿಗೆ ಚೈತನ್ಯ ತುಂಬುವ ಉದ್ದೇಶದಿಂದ ‘ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್’ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್ಎಂಇ) ರಾಷ್ಟ್ರೀಯ ಚಾಂಪಿಯನ್ಗಳಾಗಿ ರೂಪಿಸಲು ರೂ.10,000 ಕೋಟಿ ಇಕ್ವಿಟಿ ಬೆಂಬಲ ಒದಗಿಸಲಾಗಿದೆ ಎಂದರು. ಸಾರ್ವಜನಿಕ ಮೂಲಸೌಕರ್ಯ ಅಭಿವೃದ್ಧಿಗೆ ದಾಖಲೆಯ ರೂ.12.2 ಲಕ್ಷ ಕೋಟಿ ಹಂಚಿಕೆ ಮಾಡಿರುವುದು ಸರ್ಕಾರದ ದೀರ್ಘಕಾಲೀನ ಬೆಳವಣಿಗೆ ಬದ್ಧತೆಯನ್ನು ತೋರಿಸುತ್ತದೆ ಎಂದು ಜೋಶಿ ಹೇಳಿದರು.
ಜನಕೇಂದ್ರಿತ ಉಪಕ್ರಮಗಳ ಭಾಗವಾಗಿ ಏಳು ಹೈಸ್ಪೀಡ್ ರೈಲು ಕಾರಿಡಾರ್ಗಳು, ಆರೋಗ್ಯ ವಲಯ ಯೋಜನೆಗಳು, ಖೇಲೋ ಇಂಡಿಯಾ ಮಿಷನ್, ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆ ಉತ್ತೇಜನ, ತೆಂಗಿನಕಾಯಿ ಹಾಗೂ ಗೋಡಂಬಿ ಕೃಷಿಗೆ ಪ್ರೋತ್ಸಾಹ, ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ ‘ಶೀ–ಮಾರ್ಟ್’ ಯೋಜನೆಗಳನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ ಎಂದು ಅವರು ವಿವರಿಸಿದರು. ಅಂಗವಿಕಲರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ವಿಶೇಷ ಯೋಜನೆಗಳಿಗೂ ಒತ್ತು ನೀಡಲಾಗಿದೆ ಎಂದರು.
17 ಕ್ಯಾನ್ಸರ್ ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸಂಪೂರ್ಣವಾಗಿ ವಿನಾಯಿತಿ ನೀಡಿರುವುದರಿಂದ ರೋಗಿಗಳಿಗೆ ಮಹತ್ವದ ಪರಿಹಾರ ದೊರೆಯಲಿದೆ ಎಂದು ಜೋಶಿ ಹೇಳಿದರು. ವ್ಯವಹಾರ ಪ್ರಕ್ರಿಯೆಗಳ ಸರಳೀಕರಣ, ಸಹಕಾರಿ ವಲಯಕ್ಕೆ ಹೊಸ ಕಾರ್ಯಕ್ರಮಗಳು ಮತ್ತು ಐಟಿ ವಲಯಕ್ಕೆ ಬಲವಾದ ನೀತಿ ಬೆಂಬಲವೂ ಬಜೆಟ್ನ ಪ್ರಮುಖ ಅಂಶಗಳಾಗಿವೆ ಎಂದರು.
ಸಾಮಾನ್ಯ ನಾಗರಿಕರ ಮೇಲೆ ಹೆಚ್ಚುವರಿ ತೆರಿಗೆ ಹೊರೆಯನ್ನು ಹೇರದೇ, ಸಮತೋಲಿತ ಮತ್ತು ನಾವೀನ್ಯತೆ ಆಧಾರಿತ ಈ ಬಜೆಟ್ ಭಾರತವನ್ನು ಅಭಿವೃದ್ಧಿ ಹೊಂದಿದ ಹಾಗೂ ಸ್ವಾವಲಂಬಿ ಭವಿಷ್ಯದತ್ತ ದೃಢವಾಗಿ ಮುನ್ನಡೆಸುತ್ತದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.
