ಬೆಂಗಳೂರು: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ 2023ರ ವಿಧಾನಸಭಾ ಚುನಾವಣೆಯ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದೆ.
ಬಿಜೆಪಿ ಅಭ್ಯರ್ಥಿ ಸಿ. ಮುನಿರಾಜು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ಹೊರಡಿಸಿದೆ.
ಅರ್ಜಿಯಲ್ಲಿ, ಸುಬ್ಬಾರೆಡ್ಡಿ ಅವರು ನಾಮಪತ್ರದಲ್ಲಿ ಆಸ್ತಿ ವಿವರಗಳನ್ನು ಸಂಪೂರ್ಣವಾಗಿ ಪ್ರಕಟಿಸದೆ ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದರಿಂದ ಅವರ ಆಯ್ಕೆಯನ್ನು ರದ್ದುಪಡಿಸಬೇಕೆಂದು ಮನವಿ ಮಾಡಲಾಗಿತ್ತು. ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಆಯ್ಕೆಯನ್ನು ಅಸಿಂಧುಗೊಳಿಸುವಂತೆ ತೀರ್ಮಾನಿಸಿದೆ.
ಆದರೆ, ಅರ್ಜಿದಾರರಾದ ಸಿ. ಮುನಿರಾಜು ಅವರನ್ನು ನೇರವಾಗಿ ವಿಜಯಿ ಎಂದು ಘೋಷಿಸಲು ಹೈಕೋರ್ಟ್ ನಿರಾಕರಿಸಿದೆ.
ಇದರ ನಡುವೆ, ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಸುಬ್ಬಾರೆಡ್ಡಿ ಪರ ಹಿರಿಯ ವಕೀಲರು ಮನವಿ ಮಾಡಿದ್ದು, ನ್ಯಾಯಾಲಯ ತನ್ನ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. ಹೀಗಾಗಿ ಸುಪ್ರೀಂಕೋರ್ಟ್ ಮೊರೆ ಹೋಗುವವರೆಗೆ ಸುಬ್ಬಾರೆಡ್ಡಿ ಅವರಿಗೆ ತಾತ್ಕಾಲಿಕ ರಿಲೀಫ್ ಲಭಿಸಿದೆ.
