ಬೆಂಗಳೂರು: ಕೊರೋನಾ ಇದೀಗ ಎಲ್ಲಾ ಸುದ್ದಿಗಳ ಕೇಂದ್ರಬಿಂದುವಾಗಿದೆ. ಸಮರ್ಪಕ ಔಷಧಿ ಇಲ್ಲದ ಈ ಕಾಯಿಲೆಯಿಂದ ಬಚಾವ್ ಆಗಬೇಕಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಮಾರ್ಗ ಎಂಬುದು ಪ್ರಧಾನಿ ಮೋದಿ ಅವರ ಕರೆ. ಈ ಕರೆ ಬೆಂಬಲಿಸಿ ದೇಶವ್ಯಾಪಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಇದೀಗ ಮೋದಿ ಪರವಾಗಿ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ದರ್ಶನ್ ತೂಗುದೀಪ್ ಕೂಡಾ ಅಖಾಡಕ್ಕಿಳಿದಿದ್ದಾರೆ.
ಕೊರೋನಾ ಪಿಡುಗನ್ನು ದೂರ ಮಾಡುವ ನಿಟ್ಟಿನಲ್ಲಿ ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯಲ್ಲಿ ಹಣತೆ ಬೆಳಗಿಸಲು ಮೋದಿ ಕರೆ ನೀಡಿದ್ದಾರೆ. ಈ ಕರೆಯನ್ನು ಓಗೊಟ್ಟು ನಾವೆಲ್ಲರೂ ಪಾಲಿಸಬೇಕೆಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಪ್ರಧಾನಿಯವರು ಕರೆ ನೀಡಿರುವುದಕ್ಕೆ ಪ್ರತಿಪಕ್ಷಗಳು, ಹಾಗೂ ಮೋದಿ ಅವರನ್ನು ಸೈದ್ಧಾಂತಿಕವಾಗಿ ಒಪ್ಪಿಕೊಳ್ಳದ ಸಾಂಪ್ರದಾಯಿಕ ಎದುರಾಳಿಗಳು ಈ ಹಣತೆಯ ಅಭಿಯಾನವನ್ನು ಟೀಕಿಸುತ್ತಿದ್ದಾರೆ. ಇದನ್ನು ಗಮನಿಸಿದ ನಟ ದರ್ಶನ್, ಮೋದಿಯವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ದೀಪದ ಅಭಿಯಾನಕ್ಕೆ ತೂಗುದೀಪ ಸಾಥ್
ಈ ಕುರಿತಂತೆ ಟ್ವೀಟ್ ಮಾಡಿರುವ ದರ್ಶನ್, ‘ನಮ್ಮ ಪ್ರಧಾನಿಗಳ ಕರೆಯಂತೆ ಕರೋನ ವೈರಸ್’ನಿಂದ ತುಂಬಿರುವ ಅಂಧಕಾರವನ್ನು ಏಪ್ರಿಲ್ 5 , ರಾತ್ರಿ 9 ಗಂಟೆಗೆ ನಿಮ್ಮ ಮನೆಯಂಗಳದಿಂದಲೇ ಮೋಂಬತ್ತಿ/ದೀಪಗಳನ್ನು ಹಚ್ಚುವ ಮೂಲಕ ಆದಷ್ಟು ಬೇಗ ಈ ಪಿಡುಗಿನಿಂದ ಪಾರಾಗುವ ಭರವಸೆಯನ್ನು ಎಲ್ಲರಲ್ಲೂ ಮೂಡಿಸೋಣ’ ಎಂಬ ಸಂದೇಶ ನೀಡಿದ್ದಾರೆ.
‘ಎಲ್ಲಾ ಭಾರತೀಯಿರ ಒಗ್ಗಟ್ಟಿನಿಂದ ಮಾತ್ರ ಈ ಕಷ್ಟಕರ ಪರಿಸ್ಥಿತಿಯಿಂದ ಹೊರಬರಲು ಸಾಧ್ಯ. ಮನೆಯಲ್ಲಿಯೇ ಭದ್ರವಾಗಿರಿ, ನಿಮ್ಮ ನೆರೆಹೊರೆಯ ಜನರಿಗೆ ಬೆನ್ನೆಲುಬಾಗಿರಿ’ ಎಂದು ಮೆಸೇಜ್ ನೀಡಿ ಅಭಿಮಾನಿಗಳನ್ನು ಹುರಿದುಂಬಿಸಿದ್ದಾರೆ.
ದರ್ಶನ್ ಅವರ ಈ ಸಂದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ ಸಂದೇಶಕ್ಕೆ ಸಕತ್ ಕಮೆಂಟ್’ಗಳು ರಾರಾಜಿಸುತ್ತಿವೆ.