ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ಪವನ್ ಕಲ್ಯಾಣ್; ಪತ್ನಿ ಮಾಹಿತಿ

ಹೈದರಾಬಾದ್: ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಪತ್ನಿ ಅನ್ನಾ ಲೆಜ್ನೇವಾ ತಿಳಿಸಿದ್ದಾರೆ.

ಎರಡೂ ಭುಜಗಳಲ್ಲಿ ತೀವ್ರ ರೋಟೇಟರ್ ಕಫ್ ಗಾಯ ಉಂಟಾಗಿದ್ದ ಹಿನ್ನೆಲೆಯಲ್ಲಿ ವೈದ್ಯರು ಸುಮಾರು ಮೂರೂವರೆ ಗಂಟೆಗಳ ಕಾಲ ಅವರ ಬಲ ಭುಜಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ್ದರು.

ಆಸ್ಪತ್ರೆಯಲ್ಲಿ ಪವನ್ ಕಲ್ಯಾಣ್ ಅವರನ್ನು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭೇಟಿ ಮಾಡಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಅನ್ನಾ, “ಪವನ್ ಅವರು ತಮ್ಮ ನೋವನ್ನು ಎಂದಿಗೂ ತೋರಿಸಿಕೊಳ್ಳುವುದಿಲ್ಲ. ಜೀವನದ ಹೊರೆ ಅವರ ದೈಹಿಕ ನೋವಿಗಿಂತಲೂ ದೊಡ್ಡದಾಗಿರುತ್ತದೆ. ಅವರು ಅಪರೂಪಕ್ಕೆ ಮಾತ್ರ ನೋವಿನ ಬಗ್ಗೆ ಮಾತನಾಡುತ್ತಾರೆ, ಅದು ಸಹ ನೋವು ಅತಿಯಾಗಿ ಹೆಚ್ಚಾದಾಗ ಮಾತ್ರ,” ಎಂದು ಬರೆದುಕೊಂಡಿದ್ದಾರೆ.

“ಸದ್ಯ ಅವರಿಗೆ ಉತ್ತಮ ಆರೈಕೆ ನೀಡುವುದು ನನ್ನ ಜವಾಬ್ದಾರಿ. ಅವರು ಸುರಕ್ಷಿತ ಕೈಗಳಲ್ಲಿದ್ದಾರೆ ಎಂಬ ವಿಶ್ವಾಸ ಮೂಡಿಸುವುದು ಮುಖ್ಯ. ದಿನದಿಂದ ದಿನಕ್ಕೆ ಅವರ ಆರೋಗ್ಯ ಸುಧಾರಿಸುತ್ತಿದ್ದು, ಈ ಪರಿಸ್ಥಿತಿಯನ್ನು ನಾವು ಖಂಡಿತವಾಗಿ ಯಶಸ್ವಿಯಾಗಿ ಎದುರಿಸುತ್ತೇವೆ,” ಎಂದು ಅನ್ನಾ ತಿಳಿಸಿದ್ದಾರೆ.

Related posts