ಹೆಬ್ಬಾಳ ಶಾರ್ಟ್ ಟನಲ್ ಯೋಜನೆಗೆ ತೇಜಸ್ವಿ ಸೂರ್ಯ ವಿರೋಧ; ವೈಜ್ಞಾನಿಕ ಅಧ್ಯಯನಕ್ಕೆ ಆಗ್ರಹ

ಬೆಂಗಳೂರು: ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕೈಗೆತ್ತಿಕೊಂಡಿರುವ ಹೆಬ್ಬಾಳ ಶಾರ್ಟ್ ಟನಲ್ ಯೋಜನೆ ಇದೀಗ ರಾಜಕೀಯ ಹಾಗೂ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಸುಮಾರು ₹1,140 ಕೋಟಿ ಅಂದಾಜು ವೆಚ್ಚದ ಯೋಜನೆಯನ್ನು ವೈಜ್ಞಾನಿಕ ಮೌಲ್ಯಮಾಪನವಿಲ್ಲದೆ ಮುಂದುವರಿಸಬಾರದು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ಹೆಬ್ಬಾಳ ಜಂಕ್ಷನ್‌ನಿಂದ ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ (KVAFSU) ಸಂಪರ್ಕಿಸುವ ಸುಮಾರು 2.2 ಕಿ.ಮೀ. ಉದ್ದದ ಕಿರು ಸುರಂಗ ಮಾರ್ಗವನ್ನು ನಿರ್ಮಿಸಲು ಯೋಜಿಸಲಾಗಿದೆ. ಯೋಜನೆಗಾಗಿ ಹೆಬ್ಬಾಳ ಕೆರೆಯ ಸುಮಾರು 3.45 ಎಕರೆ ಜಮೀನು ವರ್ಗಾವಣೆಯಾಗುತ್ತಿದೆ ಎಂದು ವರದಿಯಾಗಿದೆ.

ಮೆಟ್ರೋ, ಉಪನಗರ ರೈಲು ಯೋಜನೆಗಳಿಗೆ ಸಂಘರ್ಷದ ಆತಂಕ

ಹೆಬ್ಬಾಳ ಶಾರ್ಟ್ ಟನಲ್ ಯೋಜನೆಯು ಪ್ರಸ್ತಾವಿತ ಮೆಟ್ರೋ ರೆಡ್ ಲೈನ್ ಹಾಗೂ ಉಪನಗರ ರೈಲು ಯೋಜನೆಗಳೊಂದಿಗೆ ಸಂಘರ್ಷಿಸುವ ಸಾಧ್ಯತೆಯಿದೆ ಎಂದು ತೇಜಸ್ವಿ ಸೂರ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ (BMLTA) ಅನುಮೋದನೆ ಪಡೆಯದೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಹಲವು ನಾಗರಿಕ ಸಂಘಟನೆಗಳು ಯೋಜನೆ ಕುರಿತು ಆಕ್ಷೇಪಣೆ ಹಾಗೂ ಮನವಿಗಳನ್ನು ಸಲ್ಲಿಸಿದ್ದರೂ, ಅವುಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸಿಲ್ಲ ಎಂದು ಸಂಸದರು ಹೇಳಿದ್ದಾರೆ.

IISc ತಾಂತ್ರಿಕ ಮೌಲ್ಯಮಾಪನಕ್ಕೆ ಒತ್ತಾಯ

ಮುಂದಿನ ಕಾಮಗಾರಿಗೆ ಮುನ್ನ ಸಮಗ್ರ ಸಂಚಾರ ಸಿಮ್ಯುಲೇಷನ್ ಅಧ್ಯಯನ ನಡೆಸಬೇಕು ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (IISc)ಯಿಂದ ಸ್ವತಂತ್ರ ತಾಂತ್ರಿಕ ಮೌಲ್ಯಮಾಪನ ಮಾಡಿಸಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಜೊತೆಗೆ, ನಗರಾಭಿವೃದ್ಧಿ ಇಲಾಖೆಯಡಿ ಬರುವ ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಮತ್ತು BMLTA ಅಭಿಪ್ರಾಯಗಳನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಅವರು ಮುಖ್ಯಮಂತ್ರಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಬೆಂಗಳೂರು ನಗರದ ಭವಿಷ್ಯದ ಸಂಚಾರ ವ್ಯವಸ್ಥೆಯನ್ನು ವೈಜ್ಞಾನಿಕ ಯೋಜನೆ, ತಜ್ಞರ ಸಲಹೆ ಹಾಗೂ ಸಮಗ್ರ ಬಹುಮಾದರಿ ಸಾರಿಗೆ ದೃಷ್ಟಿಕೋನದ ಆಧಾರದ ಮೇಲೆ ರೂಪಿಸಬೇಕು. ತಾತ್ಕಾಲಿಕ ಪರಿಹಾರ ನೀಡುವ ಯೋಜನೆಗಳ ಬದಲು ದೀರ್ಘಕಾಲೀನ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.

The ₹1,140 crore Hebbal Short Tunnel project should not proceed without a scientific assessment.

Experts have raised serious concerns over the project’s design, safety, and integration with Bengaluru’s long-term mobility network. The project also passes through Hebbal Lake… pic.twitter.com/TDXohEo8KY

— Tejasvi Surya (@Tejasvi_Surya) August 12, 2026

Related posts