ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಕಂಡಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ. ನಾಲ್ಕು ವರ್ಷಗಳಿಂದ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ಫ್ಯಾನ್ ಶೋಗಳಿಗೆ ಮುಗಿಬಿದ್ದಿದ್ದಾರೆ.
ವಿಶ್ವಾದ್ಯಂತ 12 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಕರ್ನಾಟಕದಲ್ಲೇ 1,500ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಮುಂಜಾನೆ ಶೋಗಳಿಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯಶ್ ಅವರ ತವರು ಜಿಲ್ಲೆ ಹಾಸನದಲ್ಲೂ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ನಗರದ ಫ್ಯಾನ್ ಶೋಗೆ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ಪಟಾಕಿ ಸಿಡಿಸಿ ತಮ್ಮ ನೆಚ್ಚಿನ ನಟನ ಕಮ್ಬ್ಯಾಕ್ನ್ನು ಸಂಭ್ರಮಿಸಿದರು.

ಚಿಕ್ಕಬಳ್ಳಾಪುರದಲ್ಲೂ ‘ಟಾಕ್ಸಿಕ್’ ಬಿಡುಗಡೆ ಹಿನ್ನೆಲೆಯಲ್ಲಿ ಅಭಿಮಾನಿಗಳ ಉತ್ಸಾಹ ಕಂಡುಬಂತು. ಚಿತ್ರಮಂದಿರದ ಎದುರು ಬೃಹತ್ ಕಟೌಟ್ಗಳನ್ನು ಅಳವಡಿಸಿ, ಪಟಾಕಿ ಸಿಡಿಸಿ, ತಮಟೆ ಬಾರಿಸಿ ಅಭಿಮಾನಿಗಳು ಸಂಭ್ರಮಿಸಿದರು.
ಚಿತ್ರಮಂದಿರಗಳ ಮುಂಭಾಗ ಯಶ್ ಕಟೌಟ್ಗಳಿಗೆ ಹಾಲಿನ ಅಭಿಷೇಕ, ಹಾರ ಹಾಕುವುದು ಸೇರಿದಂತೆ ವಿವಿಧ ರೀತಿಯಲ್ಲಿ ಅಭಿಮಾನಿಗಳು ಸಂಭ್ರಮಿಸಿದರು. ಬಿಡುಗಡೆಯ ಮುನ್ನವೇ ‘ಟಾಕ್ಸಿಕ್’ ಅಡ್ವಾನ್ಸ್ ಬುಕಿಂಗ್ನಲ್ಲೂ ಭರ್ಜರಿ ದಾಖಲೆ ನಿರ್ಮಿಸಿದ್ದು, ಸುಮಾರು ₹70 ಕೋಟಿ ಸಂಗ್ರಹಿಸಿದೆ ಎನ್ನಲಾಗಿದೆ. ಇದೀಗ ಚಿತ್ರದ ವಿಮರ್ಶೆ ಹಾಗೂ ಬಾಕ್ಸ್ ಆಫೀಸ್ ಪ್ರತಿಕ್ರಿಯೆ ಮೇಲೆ ಸಿನಿಪ್ರಿಯರ ಗಮನ ನೆಟ್ಟಿದೆ.

