ನೂರು ಕೇಸ್ ದಾಖಲಿಸಿದರೂ ರಾಹುಲ್ ಹೆದರಲ್ಲ: ಡಿ.ಕೆ. ಶಿವಕುಮಾರ್

ಬೆಂಗಳೂರು: “ರಾಹುಲ್ ಗಾಂಧಿ ಹುಟ್ಟು ಹೋರಾಟಗಾರ. ಹೋರಾಟಗಾರನಾಗಿ ಬದುಕುತ್ತಿರುವ ಅವರು ಹೋರಾಟಗಾರನಾಗಿಯೇ ಸಾಯುತ್ತಾರೆ. ಅವರ ವಿರುದ್ಧ ನೂರು ಪ್ರಕರಣ ದಾಖಲಿಸಿದರೂ ಇಂತಹ ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ಬೇರೆಯವರಂತೆ ರಾಹುಲ್ ಗಾಂಧಿ ಮುಚ್ಚಳಿಕೆ ಬರೆದುಕೊಡುವುದೂ ಇಲ್ಲ, ಕ್ಷಮೆ ಕೇಳುವುದೂ ಇಲ್ಲ” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ವಿರುದ್ಧ ಉತ್ತರಾಖಂಡದಲ್ಲಿ ದುರುದ್ದೇಶಪೂರ್ವಕವಾಗಿ ಎಫ್‌ಐಆರ್ ದಾಖಲಿಸಿರುವುದನ್ನು ಖಂಡಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಜನರಿಗೆ ಮನದಟ್ಟು ಮಾಡುವುದು ನಮ್ಮ ಕರ್ತವ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು, ಸ್ವಾತಂತ್ರ್ಯಾನಂತರ ದೇಶದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದವರು ಯಾರು ಎಂಬುದನ್ನು ಜನರಿಗೆ ತಿಳಿಸುವ ಅಗತ್ಯವಿದೆ ಎಂದರು.

ಕಾಂಗ್ರೆಸ್‌ನ ಶಕ್ತಿ ದೇಶದ ಶಕ್ತಿ ಹಾಗೂ ಕಾಂಗ್ರೆಸ್‌ನ ಇತಿಹಾಸವೇ ದೇಶದ ಇತಿಹಾಸ ಎಂದು ಹೇಳಿದ ಶಿವಕುಮಾರ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ವರ್ಗಗಳ ಜನರು ಅಧಿಕಾರಕ್ಕೆ ಬಂದಂತೆ. ಗಾಂಧಿ ಕುಟುಂಬ ದೇಶ ಮತ್ತು ಕಾಂಗ್ರೆಸ್ ಪಕ್ಷವನ್ನು ಒಗ್ಗಟ್ಟಾಗಿಡಲು ತ್ಯಾಗ, ಬಲಿದಾನ ಮಾಡಿದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ಸಂವಿಧಾನ ರೂಪಿಸುವಲ್ಲಿ ಕಾಂಗ್ರೆಸ್‌ನ ಕೊಡುಗೆ ಇದೆ ಎಂದು ಹೇಳಿದರು.

ರಾಹುಲ್ ಗಾಂಧಿ ಪರವಾಗಿ ಮಾತ್ರ ಈ ಪ್ರತಿಭಟನೆ ನಡೆಯುತ್ತಿಲ್ಲ. ತಪ್ಪನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆಯೇ ಪ್ರಕರಣ ದಾಖಲಿಸುವುದಾದರೆ ಕಾಂಗ್ರೆಸ್ ಇಂತಹ ಪ್ರಕರಣಗಳಿಗೆ ಹೆದರುವುದಿಲ್ಲ. ಕಾಂಗ್ರೆಸ್ ನಾಯಕರಿಗೆ ಹೋರಾಟ ರಕ್ತಗತವಾಗಿದೆ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

ಉತ್ತರಾಖಂಡದಲ್ಲಿ ಕಾಂಗ್ರೆಸ್ ಅಧ್ಯಕ್ಷರು ಸಮಾವೇಶ ನಡೆಸಿದ ಸ್ಥಳವನ್ನು ಶುದ್ಧೀಕರಣ ಮಾಡಿರುವ ಕೃತ್ಯವನ್ನು ಪ್ರಶ್ನಿಸಿದ ಅವರು, ಇಂತಹ ಘಟನೆಗೆ ಸಮರ್ಥನೆ ನೀಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಬಲಗೊಳ್ಳುತ್ತಿರುವುದನ್ನು ಮನಗಂಡು ಬಿಜೆಪಿ ಈ ರೀತಿಯ ವಿಚಾರಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.

ಯುವಕರ ಪ್ರತಿಭಟನೆ ಹಾಗೂ ಅವರ ಮೇಲಿನ ದಾಳಿಯ ವಿಚಾರದಲ್ಲೂ ಕೇಂದ್ರ ಸರ್ಕಾರವನ್ನು ಶಿವಕುಮಾರ್ ತರಾಟೆಗೆ ತೆಗೆದುಕೊಂಡರು. ತಪ್ಪನ್ನು ಯಾರಾದರೂ ತೋರಿಸಿದರೆ ಅದನ್ನು ತಿದ್ದಿಕೊಳ್ಳಬೇಕು. ಆದರೆ ಚರ್ಚೆ ನಡೆಸುವ ಬದಲು ಅಮಾನವೀಯವಾಗಿ ವರ್ತಿಸುವುದು ಸರಿಯಲ್ಲ. ಇದು ಕೇವಲ ರಾಜ್ಯದ ವಿಚಾರವಲ್ಲ, ಮಾನವೀಯತೆಯ ವಿಚಾರ ಎಂದರು.

ಬಿಜೆಪಿ ಎಲ್ಲರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, ಅದರ ಅಂತ್ಯ ಸಮೀಪಿಸಿದೆ. 2028ರಲ್ಲಿ ಕರ್ನಾಟಕದಲ್ಲಿ ಹಾಗೂ 2029ರಲ್ಲಿ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮೇಕೆದಾಟು ಪಾದಯಾತ್ರೆ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಿದ ವಿಚಾರವನ್ನು ಪ್ರಸ್ತಾಪಿಸಿದ ಶಿವಕುಮಾರ್, ರಾಹುಲ್ ಗಾಂಧಿ ವಿರುದ್ಧದ ಪ್ರಕರಣದಲ್ಲೂ ಬಿಜೆಪಿಗೆ ಕಾನೂನಿನ ಮೂಲಕ ತಕ್ಕ ಉತ್ತರ ಸಿಗಲಿದೆ ಎಂದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿನ ವಿಚಾರಣೆಯಿಂದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ನಾಯಕರು ಹೆದರಿಲ್ಲ. ಬಿಜೆಪಿ ತನ್ನ ಆಡಳಿತದ ಅನ್ಯಾಯಗಳನ್ನು ಮುಚ್ಚಿಕೊಳ್ಳಲು ಯಾತ್ರೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಯಾತ್ರೆ ನಡೆಸಿ ಜನರ ಪರ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.

Related posts