ಯಶವಂತಪುರ ಎಪಿಎಂಸಿಯಲ್ಲಿ ಬಾಲಕಾರ್ಮಿಕ ಪದ್ಧತಿಗೆ ಬ್ರೇಕ್: ತಪ್ಪಿತಸ್ಥರ ಬಂಧನಕ್ಕೆ ಡಿಕೆಶಿ ಸೂಚನೆ

ಬೆಂಗಳೂರು: ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಬಾಲಕಾರ್ಮಿಕರಿಂದ ಕೆಲಸ ಮಾಡಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಮಕ್ಕಳನ್ನು ದುಡಿಸಿಕೊಳ್ಳುವವರ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳವಾರ ಯಶವಂತಪುರ ಎಪಿಎಂಸಿಗೆ ದಿಢೀರ್ ಭೇಟಿ ನೀಡಿದ ಡಿಕೆಶಿ, ರೈತರು, ವರ್ತಕರು, ಮಧ್ಯವರ್ತಿಗಳು ಹಾಗೂ ಕೂಲಿ ಕಾರ್ಮಿಕರೊಂದಿಗೆ ಚರ್ಚೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಣ್ಣ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವ ಪದ್ಧತಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದರು.

ರಾಜ್ಯದ ಇತರೆ ಎಪಿಎಂಸಿ ಮಾರುಕಟ್ಟೆಗಳಿಗೂ ಸಚಿವರು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ, ರೈತರು ಮತ್ತು ವರ್ತಕರ ದೂರುಗಳನ್ನು ಪರಿಹರಿಸುವಂತೆ ಸೂಚಿಸಲಾಗುವುದು ಎಂದು ಹೇಳಿದರು.

ಎಪಿಎಂಸಿ ಮಾರುಕಟ್ಟೆ ರೈತರು ಮತ್ತು ವ್ಯಾಪಾರಸ್ಥರ ನಡುವಿನ ಪ್ರಮುಖ ಕೊಂಡಿಯಾಗಿದೆ. ದೇಶದ ವಿವಿಧ ಭಾಗಗಳಿಂದ ಈರುಳ್ಳಿ, ಆಲೂಗಡ್ಡೆ ಸೇರಿದಂತೆ ಹಲವು ಕೃಷಿ ಉತ್ಪನ್ನಗಳು ಯಶವಂತಪುರ ಮಾರುಕಟ್ಟೆಗೆ ಬರುತ್ತಿವೆ. ಇಲ್ಲಿನ ಉತ್ಪನ್ನಗಳ ಗುಣಮಟ್ಟ ಮತ್ತು ರುಚಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ ಎಂದು ಡಿಕೆಶಿ ಹೇಳಿದರು.

ಕಮಿಷನ್ ಬಗ್ಗೆ ಪರಿಶೀಲನೆ

ರೈತರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ್ದು, ದಲ್ಲಾಳಿಗಳು ಮತ್ತು ವರ್ತಕರು ಪಡೆಯುತ್ತಿರುವ ಕಮಿಷನ್ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಎಪಿಎಂಸಿ ವ್ಯವಸ್ಥೆ ನಂಬಿಕೆಯ ಮೇಲೆ ನಡೆಯುತ್ತಿದ್ದು, ಉತ್ತರ ಭಾರತದಿಂದಲೂ ಕೃಷಿ ಉತ್ಪನ್ನಗಳನ್ನು ನಂಬಿಕೆ ಆಧಾರದ ಮೇಲೆ ಕಳುಹಿಸಲಾಗುತ್ತಿದೆ. ಹಣವನ್ನು ಆರ್‌ಟಿಜಿಎಸ್ ಮೂಲಕ ಪಾವತಿಸಲಾಗುತ್ತಿದೆ ಎಂದರು.

ರೈತರಿಗೆ ನ್ಯಾಯವೇ ಆದ್ಯತೆ

ಎಪಿಎಂಸಿಯಲ್ಲಿ ಕೂಲಿ ಕಾರ್ಮಿಕರು, ಮಹಿಳಾ ಕಾರ್ಮಿಕರು, ರೈತರು ಹಾಗೂ ವ್ಯಾಪಾರಿಗಳೊಂದಿಗೆ ಮಾತನಾಡಿದ್ದು, ಹಲವು ಸಲಹೆಗಳು ಮತ್ತು ದೂರುಗಳು ಬಂದಿವೆ. ರಾಜ್ಯದ ಮುಖ್ಯಸ್ಥನಾಗಿ ರೈತರ ಸಮಸ್ಯೆಗಳನ್ನು ಅರಿತುಕೊಳ್ಳುವುದು ತನ್ನ ಕರ್ತವ್ಯ ಎಂದು ಡಿಕೆಶಿ ಹೇಳಿದರು.

ಮಾರುಕಟ್ಟೆ ಸ್ಥಳಾಂತರದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು. ರೈತರು, ವ್ಯಾಪಾರಿಗಳು ಮತ್ತು ಕಾರ್ಮಿಕರಿಗೆ ನ್ಯಾಯ ದೊರಕಿಸುವುದು ಸರ್ಕಾರದ ಆದ್ಯತೆ ಎಂದರು.

ಎಪಿಎಂಸಿ ಮಾರುಕಟ್ಟೆಯ ಪಾರ್ಕಿಂಗ್ ಸಮಸ್ಯೆ ಕುರಿತು ಕೇಳಿದಾಗ, ಪಾರ್ಕಿಂಗ್ ಟೆಂಡರ್‌ಗೆ ಯಾರೂ ಅರ್ಜಿ ಸಲ್ಲಿಸಿಲ್ಲ ಎಂಬ ಮಾಹಿತಿ ದೊರೆತಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಕೆಶಿ ಭರವಸೆ ನೀಡಿದರು.

Related posts