ಪ್ರಶಾಂತ್ ನೀಲ್ ಪ್ರೆಸೆಂಟ್ ಮಾಡಿದ ‘418’ಗೆ ಕೊನೆಗೂ ‘ಎ’ ಸರ್ಟಿಫಿಕೇಟ್

ಬೆಂಗಳೂರು: ಆಕ್ಷನ್‌ ಮತ್ತು ಹಿಂಸಾತ್ಮಕ ದೃಶ್ಯಗಳಿಗೆ ಹೆಸರಾಗಿರುವ ನಿರ್ದೇಶಕ ಪ್ರಶಾಂತ್ ನೀಲ್‌ ಇದೀಗ ಹಾರರ್‌ ಸಿನಿಮಾವೊಂದರ ಮೂಲಕ ಸುದ್ದಿಯಲ್ಲಿದ್ದಾರೆ. ಅವರು ಪ್ರಸ್ತುತಪಡಿಸಿರುವ ‘418’ ಸಿನಿಮಾಕ್ಕೆ ಸೆನ್ಸಾರ್‌ ಮಂಡಳಿಯಿಂದ ಆರಂಭದಲ್ಲಿ ಪ್ರಮಾಣಪತ್ರ ನೀಡಲು ನಿರಾಕರಿಸಲಾಗಿತ್ತು. ಇದೀಗ ಕೆಲವೊಂದು ಬದಲಾವಣೆಗಳ ಬಳಿಕ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ದೊರೆತಿದೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ‘418’ ಚಿತ್ರವನ್ನು ಕೀರ್ತನ್ ನಾಡಗೌಡ ನಿರ್ದೇಶಿಸಿದ್ದಾರೆ. ಇದು ಸಂಪೂರ್ಣ ಹಾರರ್‌ ಮತ್ತು ಥ್ರಿಲ್ಲರ್‌ ಅಂಶಗಳನ್ನೇ ಒಳಗೊಂಡಿರುವ ಸಿನಿಮಾ ಎನ್ನಲಾಗಿದೆ.

ಹೆದರಿಸುವ ದೃಶ್ಯಗಳೇ ಕಾರಣ!

ಸಿನಿಮಾದಲ್ಲಿರುವ ಕೆಲವು ದೃಶ್ಯಗಳು ತೀರಾ ಭಯಾನಕವಾಗಿದ್ದು, ಎಲ್ಲ ವಯೋಮಾನದ ಪ್ರೇಕ್ಷಕರಿಗೂ ಅಸಮಾಧಾನ ಉಂಟುಮಾಡುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಸಿಬಿಎಫ್‌ಸಿ ಪ್ರಮಾಣಪತ್ರ ನೀಡಲು ಹಿಂದೇಟು ಹಾಕಿತ್ತು.

ಇತ್ತೀಚಿನ ಹಾರರ್‌ ಸಿನಿಮಾಗಳಲ್ಲಿ ಕಾಮಿಡಿ, ರೊಮ್ಯಾನ್ಸ್ ಸೇರಿದಂತೆ ಹಲವು ಅಂಶಗಳನ್ನು ಸೇರಿಸಲಾಗುತ್ತದೆ. ಆದರೆ ‘418’ನಲ್ಲಿ ಆರಂಭದಿಂದ ಕೊನೆಯವರೆಗೂ ಹಾರರ್‌ ಮತ್ತು ಥ್ರಿಲ್ಲರ್‌ ಅಂಶಗಳೇ ಪ್ರಧಾನವಾಗಿವೆ ಎನ್ನಲಾಗಿದೆ. ಭಯ ಹುಟ್ಟಿಸುವ ದೃಶ್ಯಗಳು, ವಾತಾವರಣ ಹಾಗೂ ಹಿನ್ನೆಲೆ ಸಂಗೀತಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಸೆನ್ಸಾರ್‌ ಆಕ್ಷೇಪದ ಬಳಿಕ ಚಿತ್ರತಂಡ ಹಲವು ದೃಶ್ಯಗಳಲ್ಲಿ ಬದಲಾವಣೆ ಮಾಡಿದೆ. ಜತೆಗೆ ಹಿನ್ನೆಲೆ ಸಂಗೀತದ ತೀವ್ರತೆಯನ್ನೂ ಕಡಿಮೆ ಮಾಡಲಾಗಿದೆ. ಹಾರರ್‌ ಅಂಶಗಳನ್ನು ತುಸು ತಗ್ಗಿಸಿದ ಬಳಿಕ ಇದೀಗ ಚಿತ್ರಕ್ಕೆ ‘ಎ’ ಪ್ರಮಾಣಪತ್ರ ಸಿಕ್ಕಿದೆ.

ಸೆಪ್ಟೆಂಬರ್‌ 18ಕ್ಕೆ ತೆರೆಗೆ

‘418’ ಸಿನಿಮಾ ಸೆಪ್ಟೆಂಬರ್‌ 18ರಂದು ಚಿತ್ರಮಂದಿರಗಳಿಗೆ ಬರಲಿದೆ. ಚಿತ್ರದ ಪೋಸ್ಟರ್‌ಗಳೂ ಸಾಕಷ್ಟು ಭಯಾನಕವಾಗಿದ್ದು, ‘ಎ’ ಸರ್ಟಿಫಿಕೇಟ್‌ ಸಿಕ್ಕಿರುವುದನ್ನು ಸೂಚಿಸುವ ರೀತಿಯಲ್ಲಿ ರಕ್ತದಲ್ಲಿ ‘A’ ಬರೆದಿರುವ ಪೋಸ್ಟರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಪ್ರಶಾಂತ್ ನೀಲ್ ಅವರ ಶಿಷ್ಯ ನಿರ್ದೇಶಿಸಿರುವ ಸಿನಿಮಾ ಎಂಬ ಕಾರಣಕ್ಕೂ ‘418’ ಕುತೂಹಲ ಮೂಡಿಸಿದೆ.

ಇನ್ನು ಪ್ರಶಾಂತ್ ನೀಲ್‌ ಸದ್ಯ ಜೂನಿಯರ್‌ ಎನ್‌ಟಿಆರ್‌ ನಟನೆಯ ‘ಡ್ರ್ಯಾಗನ್‌’ ಸಿನಿಮಾದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಬಳಿಕ ‘ಸಲಾರ್‌ 2’ ನಿರ್ದೇಶಿಸಲಿದ್ದು, ನಂತರ ತಮಿಳು ನಟ ಅಜಿತ್‌ ಜೊತೆ ಸಿನಿಮಾ ಮಾಡುವ ಯೋಜನೆ ಇದೆ. ಆ ಬಳಿಕ ಬಹುನಿರೀಕ್ಷಿತ ‘ಕೆಜಿಎಫ್‌ 3’ ನಿರ್ದೇಶಿಸಲಿದ್ದಾರೆ.

Related posts