ಗಣೇಶ ಮೆರವಣಿಗೆ ಕುರಿತ ಹೇಳಿಕೆ ವೈರಲ್; ಟಿ.ನರಸೀಪುರ ಇನ್‌ಸ್ಪೆಕ್ಟರ್ ಧನಂಜಯ್ ವಿರುದ್ಧ ಕ್ರಮಕ್ಕೆ ಪ್ರತಾಪ್ ಸಿಂಹ, ಜೋಶಿ ಆಗ್ರಹ

ಮೈಸೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಟಿ. ನರಸೀಪುರ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್ ನೀಡಿರುವ ಎನ್ನಲಾದ ಎಚ್ಚರಿಕೆಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.

ಮಸೀದಿ ಮುಂಭಾಗದಲ್ಲಿ ಗಣೇಶ ಮೆರವಣಿಗೆ ನಡೆಸುವುದು, ಪಟಾಕಿ ಸಿಡಿಸುವುದು ಹಾಗೂ ಡಿಜೆ ಮಾದರಿಯ ಧ್ವನಿವರ್ಧಕ ಬಳಕೆ ಕುರಿತು ಇನ್‌ಸ್ಪೆಕ್ಟರ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಮೆರವಣಿಗೆ ನಡೆಸುವ ಮಾರ್ಗವನ್ನು ಮುಂಚಿತವಾಗಿ ತಿಳಿಸಬೇಕು ಹಾಗೂ ನಿಗದಿತ ಮಾರ್ಗದಲ್ಲೇ ಮೆರವಣಿಗೆ ನಡೆಸಬೇಕು ಎಂದು ಅವರು ಸೂಚಿಸಿರುವುದು ವಿಡಿಯೊದಲ್ಲಿ ಕಂಡುಬರುತ್ತದೆ ಎಂದು ವರದಿಯಾಗಿದೆ.

ಮಸೀದಿ ಪ್ರದೇಶದಲ್ಲಿ ಭದ್ರತೆ ನಿಯೋಜಿಸಲಾಗುವುದು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ನಿಯಮಗಳನ್ನು ಪಾಲಿಸಬೇಕು ಎಂದು ಇನ್‌ಸ್ಪೆಕ್ಟರ್ ಹೇಳಿರುವುದಾಗಿ ತಿಳಿದುಬಂದಿದೆ. ಆದರೆ, ಅವರ ಮಾತಿನ ಶೈಲಿ ಹಿಂದೂ ಯುವಕರನ್ನು ಬೆದರಿಸುವಂತಿದೆ ಎಂಬ ಆರೋಪವೂ ಕೇಳಿಬಂದಿದೆ.

ವಿಡಿಯೊ ವೈರಲ್ ಬಳಿಕ ಮಾಜಿ ಸಂಸದ ಪ್ರತಾಪ್ ಸಿಂಹ ಇನ್‌ಸ್ಪೆಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ತಮ್ಮ ಹುದ್ದೆಗೆ ತಕ್ಕಂತೆ ಗೌರವಯುತ ಹಾಗೂ ಸಂಯಮದಿಂದ ಮಾತನಾಡಬೇಕು. ಇನ್‌ಸ್ಪೆಕ್ಟರ್ ಸಾರ್ವಜನಿಕವಾಗಿ ಆ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಅಮಾನತಿಗೆ ಜೋಶಿ ಆಗ್ರಹ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಸಾಮಾಜಿಕ ಮಾಧ್ಯಮದ ಮೂಲಕ ಪ್ರತಿಕ್ರಿಯಿಸಿದ್ದು, ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಯುವಕರಿಗೆ ಪೊಲೀಸ್ ಅಧಿಕಾರಿಯೊಬ್ಬರು ಬೆದರಿಕೆ ಹಾಕಿರುವುದು ಗಂಭೀರ ವಿಚಾರ ಎಂದು ಹೇಳಿದ್ದಾರೆ.

ಸಾರ್ವಜನಿಕವಾಗಿ ಬೆದರಿಕೆ ಹಾಕುವ ಮಟ್ಟಿಗೆ ಅಧಿಕಾರಿಗೆ ಧೈರ್ಯ ನೀಡಿದವರು ಯಾರು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿರುವ ಜೋಶಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಅಧಿಕಾರಿಯೇ ಒಂದು ಸಮುದಾಯದ ಪರವಾಗಿ ವರ್ತಿಸುವಂತಿರುವುದು ಅಕ್ಷಮ್ಯ ಎಂದು ಟೀಕಿಸಿದ್ದಾರೆ.

ಇನ್‌ಸ್ಪೆಕ್ಟರ್ ಧನಂಜಯ್ ಅವರನ್ನು ತಕ್ಷಣ ಸೇವೆಯಿಂದ ಅಮಾನತು ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆಯ ಹೆಸರಿನಲ್ಲಿ ಹಿಂದೂ ಹಬ್ಬಗಳ ಆಚರಣೆಯನ್ನು ನಿಯಂತ್ರಿಸುವ ಪ್ರಯತ್ನ ನಡೆಯಬಾರದು ಎಂದೂ ಜೋಶಿ ಹೇಳಿದ್ದಾರೆ.

Related posts