ಮಾರು ವೇಷದಲ್ಲಿ ರಸ್ತೆಗಿಳಿದಿದ್ದ ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ್ ಸಾರಿಗೆ ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದರು. ಸಂಮಾನ್ಯ ಮನುಷ್ಯರಂತೆ ಪರ್ಯಟನೆ ಕೈಗೊಂಡ ಗೃಹ ಸಚಿವರು ಪೊಲೀಸರ ನಿರ್ಲಕ್ಷ್ಯವನ್ನು ಬೊಟ್ಟು ಮಾಡಿದರು.
ಬೆಂಗಳೂರು: ಕೆಲ ದಿನಗಳ ಹಿಂದೆ ಬೆಂಗಳೂರು ಹೊಸೂರು ರಸ್ತೆಯಲ್ಲಿ ಮಾರುವೇಷದಲ್ಲಿ ಕಾರ್ಯಾಚರಣೆಗಿಳಿದಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣವರ್, ಸಾರಿಗೆ ಇಲಾಖೆ ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲು ಮಾಡಿದ್ದರು. ಇದೀಗ ಅದೇ ರೀತಿಯ ಕಾರ್ಯಾಚರಣೆಯಿಂದ ಗಮನಸೆಳೆದಿದ್ದಾರೆ ರಾಜ್ಯದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ. ಆದರೆ ಈ ಕಾರ್ಯಾಚರಣೆ ವೇಳೆ ಗೃಹ ಮಂತ್ರಿಗೆ ಮುಜುಗರದ ಪರಿಸ್ಥಿತಿ ಎದುರಾಯಿತು.
ಲಾಕ್ ಡೌನ್ ಪರಿಸ್ಥಿತಿ ಅವಲೋಕಿಸಲು ಸಚಿವ ಬಸವರಾಜ್ ಬೊಮ್ಮಾಯಿ ಶುಕ್ರವಾರ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಅಪರಾಧ ವಿಭಾಗದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಜೊತೆ ಬೆಂಗಳೂರು ರೌನ್ಡ್ಸ್ ಕೈಗೊಂಡರು. ಕರ್ನಾಟಕ-ತಮಿಳುನಾಡು ಗಡಿ ಭಾಗದವರೆಗೂ ಇವರು ತೆರಳಿ ಪರಿಶೀಲನೆ ನಡೆಸಿದರು. ಆದರೆ ಅತ್ತಿಬೆಲೆ ಸಮೀಪ ಅವರಿಗೆ ಅಚ್ಚರಿಯ ಪ್ರಸಂಗ ಎದುರಾಯಿತು.
ನಾಕಾಬಂಧಿ ಸ್ಥಳದಲ್ಲಿ ಕರ್ತವ್ಯ ನಿರತ ದಷ್ಟ ಪೊಲೀಸ್ ಸಿಬ್ಬಂದಿಯೊಬ್ಬರು ಗೃಹ ಸಚಿವರನ್ನೇ ಪ್ರಶ್ನಿಸಲು ಮುಂದಾದರು. ಯಾವು ನೀವು? ಎಲ್ಲಿಗೆ ಹೊರಟಿದ್ದೀರಿ ಎಂದು ಸಚಿವರನ್ನೇ ಆ ಪೊಲೀಸ್ ಪ್ರಶ್ನಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಬಸವರಾಜ್ ಬೊಮ್ಮಾಯಿ, ತಾವು ಗೃಹಸಚಿವರೆಂಬುದು ಈ ಪೊಲೀಸ್’ಗೆ ಗೊತ್ತಾಗಲಿಲ್ಲವೇ ಎಂದು ಯೋಚಿಸುತ್ತಿದ್ದರು. ಸ್ಥಳದಲ್ಲೇ ಇದ್ದ ಪೊಲೀಸ್ ಕಮೀಷನರ್ ಕೂಡಲೇ ಮಧ್ಯ ಪ್ರವೇಶಿಸಿ ಸ್ಪಷ್ಟನೆ ನೀಡಿದರು. ಆ ಪೊಲೀಸ್ ಟೀಮ್ ತಮಿಳುನಾಡಿಗೆ ಸೇರಿದ್ದಾಗಿತ್ತು.
ಈ ಪ್ರಸಂಗದ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರವಿ ಚನ್ನಣ್ಣನವರ್’ಗೆ ವಿವರಿಸಿದ ಸಚಿವರು, ತಮಿಳುನಾಡು ಪೊಲೀಸರು ತಮ್ಮ ರಾಜ್ಯಕ್ಕೆ ಪ್ರವೇಶ ಮಾಡಿದ್ದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆನ್ನಲಾಗಿದೆ. ತಮಿಳುನಾಡು ಪೊಲೀಸರನ್ನು ರಾಜ್ಯದ ಹೊರಗೆ ಕಳುಹಿಸುವಂತೆ ಸಚಿವರು ಸೂಚಿಸಿದರು.