79ನೇ ಕಲ್ಯಾಣ ಕರ್ನಾಟಕ ಉತ್ಸವ: ಸರ್ವಾಂಗೀಣ ಅಭಿವೃದ್ಧಿಯೇ ಸರ್ಕಾರದ ಸಂಕಲ್ಪ.

ಬಳ್ಳಾರಿ,: ಕಲ್ಯಾಣ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ, ಸಾಮಾಜಿಕ ನ್ಯಾಯ ಹಾಗೂ ಜನರ ಏಳಿಗೆಯೇ ಸರ್ಕಾರದ ಪ್ರಮುಖ ಸಂಕಲ್ಪವಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಟಿ. ರಘುಮೂರ್ತಿ ಹೇಳಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಗುರುವಾರ ಆಯೋಜಿಸಿದ್ದ 79ನೇ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಹೈದರಾಬಾದ್ ನಿಜಾಮರ ಆಳ್ವಿಕೆಯಿಂದ ಕಲ್ಯಾಣ ಕರ್ನಾಟಕ ವಿಮೋಚನೆಗೊಂಡ ಐತಿಹಾಸಿಕ ದಿನವನ್ನು ಸ್ಮರಿಸಿದ ಅವರು, ಈ ಭಾಗದ ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ-ಬಲಿದಾನ ಮಾಡಿದ ಎಲ್ಲ ಮಹನೀಯರನ್ನು ಗೌರವದಿಂದ ಸ್ಮರಿಸಬೇಕು ಎಂದರು.

371(ಜೆ)ಯಿಂದ ವಿಶೇಷ ಸ್ಥಾನಮಾನ

ಸಂವಿಧಾನದ 371(ಜೆ) ತಿದ್ದುಪಡಿಯ ಮೂಲಕ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆತಿದ್ದು, ಇದರಿಂದ ಶಿಕ್ಷಣ, ಉದ್ಯೋಗ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಮೀಸಲಾತಿ ಹಾಗೂ ಹೆಚ್ಚುವರಿ ಅನುದಾನ ಒದಗಿಸಲು ಸಾಧ್ಯವಾಗಿದೆ ಎಂದು ರಘುಮೂರ್ತಿ ಹೇಳಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಮೂಲಕ ಈವರೆಗೆ ಸುಮಾರು ₹18 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಶಿಕ್ಷಣಕ್ಕೆ ₹2,202 ಕೋಟಿ, ಆರೋಗ್ಯಕ್ಕೆ ₹2,071 ಕೋಟಿ, ಉದ್ಯೋಗಾವಕಾಶಗಳಿಗೆ ₹974 ಕೋಟಿ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ₹498 ಕೋಟಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕೆ ₹638 ಕೋಟಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹313 ಕೋಟಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅನುದಾನ ಬಳಕೆ ಮಾಡಲಾಗಿದೆ ಎಂದು ವಿವರಿಸಿದರು.

ಅಂತರ್ಜಲ ಅಭಿವೃದ್ಧಿಗೆ ₹425 ಕೋಟಿ, ಕಲ್ಯಾಣ ಪಥಕ್ಕೆ ₹1,000 ಕೋಟಿ ಹಾಗೂ ಪ್ರಜಾಸೌಧಗಳ ನಿರ್ಮಾಣಕ್ಕೆ ₹166 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

101 ತಾಲೂಕುಗಳಲ್ಲಿ ಬರ ಪರಿಸ್ಥಿತಿ

ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿದ್ದು, 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಮೂಲಕ ಸಂಕಷ್ಟ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

ಗ್ರಾಮೀಣ ಉದ್ಯೋಗದ ಮೂಲಕ ಜನರು ಗುಳೆ ಹೋಗುವುದನ್ನು ತಡೆಯಲು ವಿಬಿ-ಜಿ ರಾಮ್ ಜಿ ಯೋಜನೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ 125 ದಿನಗಳ ವೇತನ ಉದ್ಯೋಗದ ಕಾನೂನುಬದ್ಧ ಭರವಸೆ ಕಲ್ಪಿಸಲಾಗಿದೆ.

ಯುವಜನರಿಗೆ ಆದ್ಯತೆ

ಸಾಮಾಜಿಕ ಸಮಾನತೆಯ ಆಶಯದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಐದು ಗ್ಯಾರಂಟಿ ಯೋಜನೆಗಳಿಗೆ ₹1,41,210 ಕೋಟಿ ವಿನಿಯೋಗಿಸಿ 2.70 ಕೋಟಿ ಕುಟುಂಬಗಳಿಗೆ ನೆರವು ನೀಡಲಾಗಿದೆ ಎಂದು ರಘುಮೂರ್ತಿ ತಿಳಿಸಿದರು.

ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಲ್ಲಿ ನಾಯಕತ್ವ ಗುಣ ಬೆಳೆಸಲು 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ಗಳ ಸ್ಥಾಪನೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ, 1,000 ಕರ್ನಾಟಕ ಪಬ್ಲಿಕ್ ಶಾಲೆಗಳ ಆರಂಭ ಹಾಗೂ ಬೆಂಗಳೂರಿನಲ್ಲಿ ಎಐ ವಿಶ್ವವಿದ್ಯಾಲಯ ಸ್ಥಾಪನೆಯಂತಹ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಜನಪ್ರತಿನಿಧಿಗಳು ಟೀಕೆ ಮತ್ತು ಆರೋಪಗಳಿಗೆ ಸೀಮಿತವಾಗದೆ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಸಂಸದ ಈ. ತುಕಾರಾಮ್, ಸಂಡೂರು ಶಾಸಕಿ ಈ. ಅನ್ನಪೂರ್ಣ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷ ಸಿರಿಗೇರಿ ಪನ್ನರಾಜ್, ಡಾ. ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಮಹಾನಗರ ಪಾಲಿಕೆ ಮೇಯರ್ ಪಿ. ಗಾದೆಪ್ಪ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಡಾ. ಪಿ.ಎಸ್. ಹರ್ಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಜಿಲ್ಲಾ ಪಂಚಾಯತ್ ಸಿಇಒ ಮಹಮ್ಮದ್ ಹಾರಿಸ್ ಸುಮೇರ್ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Related posts