ಕುನೋದಲ್ಲಿ ಭಾರತದಲ್ಲಿ ಜನಿಸಿದ ಚಿರತೆಯಿಂದ ಐದು ಮರಿಗಳ ಜನನ; ಸಂಖ್ಯೆ 60ಕ್ಕೆ ಏರಿಕೆ

ನವದೆಹಲಿ: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರತದಲ್ಲಿ ಜನಿಸಿದ ಹೆಣ್ಣು ಚಿರತೆಯೊಂದು ಐದು ಆರೋಗ್ಯವಂತ ಮರಿಗಳಿಗೆ ಜನ್ಮ ನೀಡಿದ್ದು, ಇದರೊಂದಿಗೆ ದೇಶದಲ್ಲಿನ ಒಟ್ಟು ಚಿರತೆಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಸೋಮವಾರ ತಿಳಿಸಿದೆ.

ಇದರೊಂದಿಗೆ ಭಾರತದಲ್ಲಿ ಜನಿಸಿರುವ ಚಿರತೆಗಳ ಸಂಖ್ಯೆ 41ಕ್ಕೆ ತಲುಪಿದೆ. 32 ತಿಂಗಳ ವಯಸ್ಸಿನ ‘KJP21’ ಎಂಬ ಹೆಣ್ಣು ಚಿರತೆ ಕುನೋದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ್ದು, ಇದು ‘ಪ್ರಾಜೆಕ್ಟ್ ಚಿರತೆ’ಯ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ.

‘ಮುಖಿ’ ಮತ್ತು ‘KGP12’ ನಂತರ ಭಾರತದಲ್ಲಿ ಜನಿಸಿ ಮರಿಗಳಿಗೆ ಜನ್ಮ ನೀಡಿದ ಮೂರನೇ ಹೆಣ್ಣು ಚಿರತೆ KJP21 ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ. ಭಾರತದ ನೆಲದಲ್ಲಿ ಚಿರತೆಗಳ ಮುಂದಿನ ಪೀಳಿಗೆ ರೂಪುಗೊಳ್ಳುತ್ತಿರುವುದಕ್ಕೆ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಮರಿಗಳ ತಂದೆ ಬೋಟ್ಸ್ವಾನಾದಿಂದ ತರಲಾದ ಗಂಡು ಚಿರತೆಯಾಗಿರುವುದರಿಂದ, ಹೊಸ ಮರಿಗಳು ಭಾರತದಲ್ಲಿ ಬೋಟ್ಸ್ವಾನಾ ಮೂಲದ ವಂಶಾವಳಿಯ ಆರಂಭವನ್ನೂ ಸೂಚಿಸುತ್ತವೆ ಎಂದು ಯಾದವ್ ತಿಳಿಸಿದ್ದಾರೆ. ಈ ಹೊಸ ವಂಶಾವಳಿ ದೇಶದಲ್ಲಿ ಹೆಚ್ಚುತ್ತಿರುವ ಚಿರತೆಗಳ ಸಂಖ್ಯೆಯ ತಳಿ ವೈವಿಧ್ಯತೆಯನ್ನು ಮತ್ತಷ್ಟು ಹೆಚ್ಚಿಸಲು ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.

ಭಾರತದ ನೆಲದಲ್ಲಿ ಜನಿಸಿದ ಚಿರತೆಗಳ ಮತ್ತೊಂದು ಪೀಳಿಗೆಯ ಆಗಮನವು ದೇಶದ ಚಿರತೆ ಮರುಪರಿಚಯ ಕಾರ್ಯಕ್ರಮದ ಹೊಸ ಅಧ್ಯಾಯವಾಗಿದೆ ಎಂದು ಸಚಿವರು ಬಣ್ಣಿಸಿದ್ದಾರೆ.

‘ಪ್ರಾಜೆಕ್ಟ್ ಚಿರತೆ’ಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಪಶುವೈದ್ಯರು, ಕ್ಷೇತ್ರ ಸಿಬ್ಬಂದಿ, ಉದ್ಯಾನವನದ ನಿರ್ವಹಣಾ ತಂಡ ಹಾಗೂ ಇತರ ಸಿಬ್ಬಂದಿಗೆ ಭೂಪೇಂದರ್ ಯಾದವ್ ಅಭಿನಂದನೆ ಸಲ್ಲಿಸಿದ್ದಾರೆ. ಚಿರತೆಗಳ ಸಂರಕ್ಷಣೆ ಮತ್ತು ಸಂತಾನೋತ್ಪತ್ತಿಯಲ್ಲಿ ಅವರ ನಿರಂತರ ಶ್ರಮ ಹಾಗೂ ಬದ್ಧತೆ ಈ ಸಾಧನೆಗೆ ಕಾರಣವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related posts