ಮಕ್ಕಳಲ್ಲಿ ಹಾಸಿಗೆ ಒದ್ದೆ ಸಮಸ್ಯೆ: ಆಯುರ್ವೇದ-ಯೋಗ ಸಂಯೋಜನೆಯಿಂದ ಆಶಾದಾಯಕ ಫಲಿತಾಂಶ

ITRA ಅಧ್ಯಯನದಲ್ಲಿ ಸಂಯೋಜಿತ ಚಿಕಿತ್ಸಾ ಗುಂಪಿನಲ್ಲಿ ಶೇ.70ರಷ್ಟು ಸುಧಾರಣೆ; ಸ್ಮರಣಶಕ್ತಿ, ಕಿರಿಕಿರಿ ಮತ್ತು ಅತಿಚಟುವಟಿಕೆಯಲ್ಲೂ ಬದಲಾವಣೆ

ನವದೆಹಲಿ: ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ರಾತ್ರಿ ಹಾಸಿಗೆ ಒದ್ದೆ ಮಾಡಿಕೊಳ್ಳುವ ಸಮಸ್ಯೆ (ನಾಕ್ಟರ್ನಲ್ ಎನ್ಯುರೆಸಿಸ್) ನಿರ್ವಹಣೆಯಲ್ಲಿ ಆಯುರ್ವೇದ ಔಷಧ ಮತ್ತು ಆಯ್ದ ಯೋಗಾಸನಗಳ ಸಂಯೋಜನೆಯು ಆಶಾದಾಯಕ ಫಲಿತಾಂಶ ನೀಡಿದೆ ಎಂದು ಜಾಮ್‌ನಗರದ ಇನ್‌ಸ್ಟಿಟ್ಯೂಟ್ ಆಫ್ ಟೀಚಿಂಗ್ ಅಂಡ್ ರಿಸರ್ಚ್ ಇನ್ ಆಯುರ್ವೇದ (ITRA) ನಡೆಸಿದ ಎಂಟು ವಾರಗಳ ಅಧ್ಯಯನ ವರದಿ ಮಾಡಿದೆ.

6ರಿಂದ 14 ವರ್ಷ ವಯಸ್ಸಿನ ಸುಮಾರು 38 ಮಕ್ಕಳನ್ನು ಒಳಗೊಂಡ ಅಧ್ಯಯನದಲ್ಲಿ, ಕೇವಲ ಆಯುರ್ವೇದ ಔಷಧ ಪಡೆದ ಮಕ್ಕಳಿಗಿಂತ ಔಷಧದ ಜತೆಗೆ ಯೋಗಾಸನ ಅಭ್ಯಾಸ ಮಾಡಿದ ಮಕ್ಕಳಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿದೆ. ಸಂಶೋಧನಾ ಫಲಿತಾಂಶಗಳು ‘AYU’ ಜರ್ನಲ್‌ನಲ್ಲಿ ಪ್ರಕಟವಾಗಿವೆ.

ITRAದ ಕೌಮಾರಭೃತ್ಯ ವಿಭಾಗ ನಡೆಸಿದ ಅಧ್ಯಯನದಲ್ಲಿ ಮಕ್ಕಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಮೊದಲ ಗುಂಪಿಗೆ ಬ್ರಾಹ್ಮಿ, ಶಂಖಪುಷ್ಪಿ, ಯಷ್ಟಿಮಧು ಮತ್ತು ಗುಡುಚಿ ಒಳಗೊಂಡ ‘ಮೇಧ್ಯ ರಸಾಯನ ಚೂರ್ಣ’ವನ್ನು ದಿನಕ್ಕೆ ಎರಡು ಬಾರಿ ಹಾಲಿನೊಂದಿಗೆ ನೀಡಲಾಯಿತು. ಎರಡನೇ ಗುಂಪಿಗೆ ಇದೇ ಔಷಧದ ಜತೆಗೆ ಉತ್ಕಟಾಸನ, ಅರ್ಧ-ಶಲಭಾಸನ, ಭುಜಂಗಾಸನ ಮತ್ತು ಶವಾಸನಗಳನ್ನು ಅಭ್ಯಾಸ ಮಾಡಿಸಲಾಯಿತು.

ಅಧ್ಯಯನದ ಪ್ರಕಾರ, ಕೇವಲ ಆಯುರ್ವೇದ ಚಿಕಿತ್ಸೆ ಪಡೆದ ಗುಂಪಿನಲ್ಲಿ ಹಾಸಿಗೆ ಒದ್ದೆ ಮಾಡುವ ಸಮಸ್ಯೆಯ ಆವರ್ತನದಲ್ಲಿ ಸುಮಾರು ಶೇ.38ರಷ್ಟು ಸುಧಾರಣೆ ಕಂಡುಬಂದರೆ, ಆಯುರ್ವೇದ ಔಷಧ ಮತ್ತು ಯೋಗದ ಸಂಯೋಜಿತ ಚಿಕಿತ್ಸೆ ಪಡೆದ ಗುಂಪಿನಲ್ಲಿ ಸುಮಾರು ಶೇ.70ರಷ್ಟು ಸುಧಾರಣೆ ದಾಖಲಾಗಿದೆ.

ಸಂಯೋಜಿತ ಚಿಕಿತ್ಸಾ ಗುಂಪಿನ ಮಕ್ಕಳಲ್ಲಿ ಸ್ಮರಣಶಕ್ತಿಯಲ್ಲಿ ಸುಮಾರು ಶೇ.61ರಷ್ಟು ಸುಧಾರಣೆ ಕಂಡುಬಂದಿದ್ದು, ಕಿರಿಕಿರಿ ಸ್ವಭಾವದಲ್ಲಿ ಶೇ.66ರಷ್ಟು ಮತ್ತು ಅತಿಚಟುವಟಿಕೆಯಲ್ಲಿ ಶೇ.71ರಷ್ಟು ಇಳಿಕೆ ಕಂಡುಬಂದಿದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಪ್ರೊಫೆಸರ್ ವೈದ್ಯ ವೀರೇಂದ್ರ ಕೋರಿ, ವೈದ್ಯ ಸಾಗರ್ ಭಿಂದೆ ಹಾಗೂ ವೈದ್ಯ ಅಮಿಷಾ ಬವರ್ವಾ ಅವರ ನೇತೃತ್ವದಲ್ಲಿ ಸಂಶೋಧನೆ ನಡೆಸಲಾಗಿದೆ.

ರಾತ್ರಿಯಲ್ಲಿ ಹಾಸಿಗೆ ಒದ್ದೆ ಮಾಡಿಕೊಳ್ಳುವ ಸಮಸ್ಯೆಯು ಮೂತ್ರಕೋಶ ನಿಯಂತ್ರಣದ ತೊಂದರೆಗಳ ಜತೆಗೆ ಮಾನಸಿಕ ಮತ್ತು ವರ್ತನೆಗೆ ಸಂಬಂಧಿಸಿದ ಅಂಶಗಳೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ITRA ನಿರ್ದೇಶಕಿ ಪ್ರೊಫೆಸರ್ ಡಾ. ತನುಜಾ ನೇಸರಿ ತಿಳಿಸಿದ್ದಾರೆ.

ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯನ್ನು ಸೂಕ್ತ ಜೀವನಶೈಲಿ ಅಭ್ಯಾಸಗಳೊಂದಿಗೆ ಸಂಯೋಜಿಸುವುದರಿಂದ ದೊರೆಯಬಹುದಾದ ಪ್ರಯೋಜನಗಳನ್ನು ಅಧ್ಯಯನವು ಸೂಚಿಸುತ್ತದೆ. ಮಕ್ಕಳಲ್ಲಿ ಇಂತಹ ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ, ಸೂಕ್ತ ವೈದ್ಯಕೀಯ ಮಾರ್ಗದರ್ಶನದಲ್ಲಿ ನಿರ್ವಹಿಸುವ ಅಗತ್ಯವೂ ಇದೆ ಎಂದು ಅವರು ಹೇಳಿದ್ದಾರೆ.

Related posts